Tuesday, 24 December 2024

ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು 
- ಡಾ.ಸಂಪತ್ ಬೆಟ್ಟಗೆರೆ ಅವಲೋಕನ-
ಡಾ.ಸರಜೂ ಕಾಟ್ಕರ್ ಅನುವಾದಿತ ಕವಿತೆಗಳ ಹಿನ್ನೆಲೆಯಲ್ಲಿ
ರವಿ ಬೆಳಗೆರೆ ಓ ಮನಸೇ ಪತ್ರಿಕೆಯಲ್ಲಿ 





Thursday, 17 October 2024

 

ಸಮಾಜಶಾಸ್ತ್ರಜ್ಞೆಯ 

ಕವಿ ಹೃದಯಕ್ಕೊಂದು

ಸಹೃದಯಿ ಓದಿನ ಅನಿಸಿಕೆ!

-ಡಾ.ಸಂಪತ್ ಬೆಟ್ಟಗೆರೆ

  ಕನ್ನಡ ಉಪನ್ಯಾಸಕರು, ಲೇಖಕರು 

  ಮೂಡಿಗೆರೆ - ೫೭೭೧೧೩

  ಮೊ: ೯೩೫೩೦೫೭೦೬೭

ಎಲೆಯ ಮರೆಯಲಿ ಚಂದ್ರನಿದ್ದು
ನೋಡಬಂದೆ ಆಚೆಗೆದ್ದು
ಚಾಚಿ ಕೈಯ ಎಳೆದುಕೊಂಡ
ಹಾದುಹೋಗೋ ಮೋಡವೊಂದ
ತಿಳಿದಿದೆ ಕಳ್ಳ ಶಶಿಗೂ
ಕತ್ತಲಾದರೆ ಕೂರಲಾರೆ ಅವಿತು ಎಂದು
ಸೋತು ಹುಸಿನಗೆ ಬೀರಿನಾಚುತ
ಎದುರು ಬಂದ ಬೆಳ್ಳಿಬೆಳಕ ಸೂಸುತ.
('ಬೆಳ್ಳಿ ಬೆಳಕು' ಕವನ - ಶಶಿ ಮಂಡಲಮನೆ)
ನನ್ನ ಆತ್ಮೀಯ ಹಿರಿಯರಲ್ಲಿ ಓರ್ವರಾದ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯವರಾದ ಡಾ.ವಿಜಯಕುಮಾರ್ ಅವರೇಕಾಡು ಅವರು ಈಚೆಗೆ ನಡೆದ ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ ಅದರಂತೆ ಅದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಚಿತ್ರವನ್ನು ತಮ್ಮ ವಾಟ್ಸಫ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ನಾನು ಅವರಿಂದ ಅದರ ಪ್ರಕಾಶಕರ ವಿಳಾಸ ಪಡೆದು ಗೂಗಲ್ ಫೇ ಮೂಲಕ ಅದರ ಮಾರಾಟ ಮೊತ್ತವನ್ನು ಪಾವತಿಸಿ ಕವನ ಸಂಕಲನವನ್ನು ಅಂಚೆಯಲ್ಲಿ ತರಿಸಿಕೊಂಡು ಓದಿದೆ. ಇಷ್ಟೊಂದು ಕುತೂಹಲ ಅದರ ಮೇಲೆ ಏಕೆಂದರೆ ಕವನ ಸಂಕಲನದ ಹೆಸರು "ಬೆಳ್ಳಿಬೆಳಕು". ಇದೇ ಶೀರ್ಷಿಕೆಯಡಿಯಲ್ಲಿ ನಾನು ಒಂದೆರಡು ವರ್ಷಗಳ ಹಿಂದೆ ನಾನೂ ಓದಿದ್ದ ನಮ್ಮೂರ ಪ್ರೌಢಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಕಟಿಸಿದ್ದ ಸಂಪಾದಿತ ಸ್ಮರಣ ಸಂಚಿಕೆಯನ್ನು ರೂಪಿಸಿದ್ದುದು.

                                                                                                            

ಬೆಳ್ಳಿ ಬೆಳಕು   (ಕವನ ಸಂಕಲನ)
ಲೇ: ಶಶಿ ಎಂ.ಟಿ ಮಂಡಲಮನೆ
ಪ್ರ: ಅಮೃತೇಶ್ವರ ಪ್ರಕಾಶನ, ಮೈಸೂರು 
       
ಹೀಗೆ ಮತ್ತೊಂದು ಸಹೃದಯಿ 'ಬೆಳ್ಳಿಬೆಳಕು' ನನ್ನ ಕೈಸೇರಿ  ಪ್ರೀತಿಯ ಪುಟ ತೆರೆದು ಓದಿಸಿಕೊಳ್ಳತೊಡಗಿತು. ಮೊದಲಿಗೆ ಮುಖಪುಟದಲ್ಲಿ ಪೂರ್ಣಿಮೆಯ ಮಿಥುನ. ಮುದ್ದು ಪೂರ್ಣಚಂದ್ರ, ಹಾಲು ಚೆಲ್ಲಿದಂತಹ ಪ್ರಕೃತಿಯ ಮಂಡಲದ ನಡುವಣವೊಂದು ಪುಟ್ಟಮನೆ. ಅದರೆದುರು ಹಸಿರಿನಂಗಳ. ಇಕ್ಕೆಲಗಳಲ್ಲಿ ಸಣ್ಣ ಸಣ್ಣ ಕಲ್ಲುಗಳ ಮಧ್ಯೆ ಹರಿವ ಪುಟ್ಟ ಜೀವತೊರೆ. ಅದರ ಮೇಲೆ 'ಶಶಿ ಮಂಡಲಮನೆ' ಎನ್ನುವ ಕವಯತ್ರಿಯ ಹೆಸರಿನ ಸುಂದರ ಮುದ್ರಣ. ಹೀಗೆ ಮೊದಲು ಮುಖಪುಟಕ್ಕೆ ಮರುಳಾಗಿ ಪುಟ ತೆರೆದರೆ ಕವಿ ಪರಿಚಯ. ಅದರ ಮೊದಲ ಪ್ಯಾರಾದಲ್ಲಿ "ಕುಮಾರಿ ಶಶಿ ಎಂ.ಟಿ ಮಂಡಲಮನೆ ಅವರು 08-08-1998 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಂಡಲಮನೆ ಗ್ರಾಮದಲ್ಲಿ ಜನಿಸಿದರು" ಸಾಲುಗಳು. ಹೀಗೇ ಮನಸಿನಲ್ಲಿ ಕವನ ಸಂಕಲನದ ಪ್ರಕಟವಾದ ಪ್ರಸ್ತುತ ವರ್ಷ 2024 ರಿಂದ ಕವಯತ್ರಿ ಹುಟ್ಟಿನ ವರ್ಷವಾದ 1998 ಅನ್ನು ವ್ಯವಕಲನ ಕ್ರಿಯೆಗೊಳಪಡಿಸಿದಾಗ ಕಂಡದ್ದು ಅದೇ ಬೆಳ್ಳಿಬೆಳಕು! ಎಂದರೆ ಹಾಗೇ ಹಿಂಬದಿಯ ಬೆನ್ನುಡಿ ಪುಟವನ್ನು ಒಂದೇ ಸಲ ನೋಡಿದಾಗ ಕವಯತ್ರಿಯದು ಬೆಳ್ಳಿ ವಯಸ್ಸಿನ ಮಂದಹಾಸ!

 ಶಶಿ ಎಂ.ಟಿ ಮಂಡಲಮನೆ

ಇಂತಿಪ್ಪ ಕವರ್ ಪೇಜ್ ಹಾಗೂ ಕವಯತ್ರಿ ಇಮೇಜ್ ನಲ್ಲಿ ರೂಪುಗೊಂಡ ಬೆಳ್ಳಿಬೆಳಕು ತುಂಬಾ ಚೆನ್ನಾಗಿದೆ ಎಂದು ಮೊದಲ ನೋಟಕ್ಕೆ ಅನ್ನಿಸುವುದೂ ಇನ್ನೊಂದು ಕವಿ ಹೃದಯಕ್ಕೆ ಮಾತ್ರ ಸಾಧ್ಯ ತಾನೇ? ಅದರಂತೆ ನಾನೂ ಇಲ್ಲಿ ಕವಿಮಿತ್ರನಂತೆ ಹೊಸ ಕವಯತ್ರಿ ಹೃದಯ ಬಡಿತದ  ಕವನಗಳನ್ನು ಪರಿಚಯದ ಅವಲೋಕನ ಮಾಡಿಕೊಳ್ಳುವ ಮುನ್ನೋಟ ಬೀರಿದೆ. ಮುಂದುವರಿದ ಕವಯತ್ರಿಯ ಪರಿಚಯ ಪುಟದಲ್ಲಿ ಕಂಡುಕೊಂಡಂತೆ ಅವರು ಸಮಾಜಶಾಸ್ತ್ರ ಪದವೀಧರೆ ಎಂದು ಗೊತ್ತಾಯಿತು. ಅಂದರೆ ಸೋಶಿಯಲೋಜಿ ಹುಡುಗಿ. ಇಂತಹ ಸಮಾಜಶಾಸ್ತ್ರಜ್ಞೆಯ ಕವನಗಳು ತುಂಬಾನೇ ಇಂಟರೆಸ್ಟಿಂಗ್ ಅನ್ನಿಸಬಹುದಲ್ವಾ? ಅಂದಹಾಗೆ ಮುಂದೆ ಓದತೊಡಗಿದೆ.


ಮೊದಲು ಶಶಿಯ ಮಾತೃಪ್ರೇಮದ 'ಅಮ್ಮ' ಕವನದ  ಮೊಗ್ಗಿನ ಮನಸ್ಸಿನ ಪುಟ ತೆರೆದುಕೊಳ್ಳುವುದು ಹೀಗೆ-

ಅಮ್ಮನಿರಬೇಕು ಮನೆಯಂಗಳದಿ
ಮನೆಗೆ ಸಿರಿಯಾಗಿ ಮನೆಯೆಂದರೆ ಅವಳಾಗಿ
ಮೋಡಕವಿದಾಗ ಹರಡಿದ ಬಟ್ಟೆಯ ನೆನಪಿಗಾಗಿ
ನೆನೆವ ಅಪ್ಪನ ಚಪ್ಪಲಿಯ ಅರಗಿಗೆ ಸರಿಸಲಿಕ್ಕಾಗಿ
ಅರೆಬರೆ ಒಣಗಿದ ಅಕ್ಕಿಯ ಅವಸರದಿ ಎತ್ತಲಿಕ್ಕಾಗಿ
ಅಮ್ಮನಿರಬೇಕು, ಅಂಗಳದಿ ಮನೆಗೆ ಸಿರಿಯಾಗಿ

ಹಸಿದ ಹೊಟ್ಟೆಗೆ ಅಡುಗೆ ತಯಾರಿಸಿ
ಹರಿದ ಬಟ್ಟೆಗೆ ಸೂಜಿ ತೋರಿಸಿ
ಮನೆಯ ಚಿನ್ನದೊಡವೆಯೇ ಅವಳಾಗಿ
ಅಮ್ಮನಿರಬೇಕು ಮನೆಗೆ ಸಿರಿಯಾಗಿ

ಸಮಾಜಶಾಸ್ತ್ರದಂತೆ ಬದುಕಿನ ಮುಖ್ಯ ಘಟಕ ಕುಟುಂಬ. ಅದು ಅರ್ಥಪೂರ್ಣತೆಯಿಂದ ಒಂದು ಚೌಕಟ್ಟನ್ನು ತೆಗೆದುಕೊಂಡು ಅಚ್ಚುಕಟ್ಟಾಗಿ ಮುನ್ನಡೆಯಬೇಕು ಎಂದರೆ ಮನೆಯ ಮಹಿಳೆ ಪಾತ್ರ ಪ್ರಧಾನವಾಗಿ ಇರುತ್ತದೆ. ಇಂತಹ ಪ್ರೀತಿಯ ಮನಸೇ ತಾಯಿ. ಕನ್ನಡದ ನುಡಿಮುತ್ತಿನಂತೆ ಜನನಿ ತಾನೆ ಮೊದಲ ಗುರು? ಇಂತಹ ಅಮ್ಮನ ಜೀವನ ಚಿತ್ರವನ್ನು ಶಶಿಯವರು ಒಂದು ಮಧ್ಯಮ ವರ್ಗದ ಕುಟುಂಬದ ಮಹಿಳೆಯರ ಸಂಕೇತವಾಗಿ ಅನಾವರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಇಲ್ಲಿನ ಕವನ 'ಅಮ್ಮ' ಸರಳ, ಸುಂದರ ನಿರೂಪಣೆಯೊಂದಿಗೆ ತುಂಬಾ ಇಷ್ಟವಾಗುತ್ತದೆ.

ಇಂದಿನ ಬಂಡವಾಳಶಾಹಿ ಜಗತ್ತು ಸಮಾಜಶಾಸ್ತ್ರ ಪ್ರತಿಪಾದಿಸುವ ಪ್ರೀತಿ, ವಿಶ್ವಾಸ, ನಂಬಿಕೆ, ವಿಚಾರ ವೈವಿಧ್ಯದಂತಹ ಜೀವನ ಮೌಲ್ಯಗಳನ್ನು ಮರೆತು 'ಒಲವೇ ಜೀವನ ಸಾಕ್ಷಾತ್ಕಾರ' ಎಂಬ ಹೃದಯವಂತ ಭಾವನೆ ತೊರೆದು 'ಒಲವೇ ಜೀವನ ಲೆಕ್ಕಾಚಾರ' ಎಂಬ ಹಣದ ಮಾರುಕಟ್ಟೆಯಲ್ಲಿ ಕಳೆದುಹೋಗುತ್ತಿದೆಯೇನೋ ಎಂದು ಕಾಡುತ್ತದೆ. ಇದಕ್ಕೆ ಶಶಿಯವರ ಮನಸು ಕೂಡ ಭಾವಶೂನ್ಯವಾದ ಅಂತಹ ಭಾವವೇ ಬೆಳೆಯದ ಕೇವಲ  ಬುದ್ಧಿಮತ್ತೆಯ ಕೃತಕ ಜೀವನದ ಚಿತ್ರವನ್ನು ಸರಿಕಾಣದು ಎಂಬುದಾಗಿ "ಅರ್ಥದ ಅರವು" ಕವನದಲ್ಲಿ ಖಂಡಿಸುತ್ತದೆ. ಇಲ್ಲಿ ಅರ್ಥ ಎಂದರೆ ಮೀನಿಂಗ್ ಎಂದಷ್ಟೇ ಅರ್ಥವಲ್ಲ, ಹಣದ ಜಗತ್ತು ಎಂಬರ್ಥದಲ್ಲಿ ಧ್ವನಿಪೂರ್ಣವಾಗಿ ಬಳಕೆಯಾಗಿದೆ. ಅದರಂತೆ-

ಅಪಾರವೇ ದೊಡ್ಡದೆಂದು ಭಾವಿಸಿ
ಅರಿವನ್ನು ಕಡೆಗಣಿಸಿ
ಅರ್ಥದ ಆಸೆಗೆ ಬಿದ್ದು
ಅಪಾರ್ಥದಲಿ ಮುಳುಗಿದೆ ಜಗತ್ತು
ಮಂಕುಬುದ್ಧಿಯ ಭಾವದಲಿ
ಪ್ರೀತಿ - ವಿಶ್ವಾಸ ಕ್ಷೀಣವಾಗಿ
ಅತಿಯಾದ ಅನುಕರಣೆ ತೊರೆದು
ಅನುರಾಗ ಜಗ "ಅರ್ಥವಾಗಬೇಕಿದೆ"
ನೋಟನ ಜ್ಞಾನದಲಿ ಅವಿವೇಕಿಯಾಗಿ
ಅವರಿವರ ನೋಟದಲ್ಲಿ ಅಹಂಕಾರಿಯಾಗಿ
ಅನುಶಾಸನಗಳ ಕಿತ್ತೊಗೆದು ಬದುಕುವುದು
ಅನುರಕ್ತಿ ಜೀವನಕ್ಕೆ ಸರಿ ಹೊಂದದು

ಹೀಗೆ ಪ್ರಬುದ್ಧ ಮನಸ್ಸಿಗೆ ತೋಚಿದನ್ನು ಅಷ್ಟೇ ಸಹಜವಾಗಿ ಗೀಚುವ ಕವಯತ್ರಿಯ ಭಾವದಲೆಯಲಿ ಅನೇಕ ಬಗೆಯ ಎಲೆಗಳು ತೇಲಿ ಸೆಳೆಯುವವು.

ಪ್ರೀತಿ ಸ್ನೇಹಗಳ ಹುಟ್ಟೂರಲ್ಲೇ ಬಿಟ್ಟು
ತಾಯ್ನಾಡಿಗಾಗಿ ಪ್ರಾಣ ಮುಡಿಪಿಟ್ಟು
ಎದೆ ಎತ್ತಿನಿಂತವನ ತಾಕತ್ತು
ವಿವರಿಸೋ ಮಾತೇಕೆ? ರಾಷ್ಟ್ರಕ್ಕೆ ಗೊತ್ತು.

ಇದು 'ಹೆಮ್ಮೆಯ ಕಲಿ ಸೈನಿಕ' ಕವನದ ಕೊನೆಯ ಪ್ಯಾರಾ. ಹಾಗೆ ಮತ್ತೆ ಹಾಗೇ ಗಮನಿಸಿ ಕೊಂಡರೆ ಎಷ್ಟೊಂದು ಭಾವಪೂರ್ಣ, ಅರ್ಥಪೂರ್ಣ ಅಭಿಪ್ರಾಯವಾಗಿದೆ. ಇದು ಶಶಿಯವರ ಕಾವ್ಯದ ಸರಳ ಶೈಲಿ. ಎಂದರೆ ಬಹುತೇಕ ಕವಿಗಳ ಕವನಗಳನ್ನು ಓದಿದರೆ ಅರ್ಥವಾಗುವುದೇ ಇಲ್ಲ ಎಂಬುದನ್ನು ಇದು ಸುಳ್ಳಾಗಿಸಿದೆ. ಜೊತೆಗೆ ಸರಳ ರಚನೆಯ ಇದು ಅಷ್ಟೊಂದು ಕಾವ್ಯಬಂಧದಿಂದ ಕೂಡಿಲ್ಲ ಎಂಬಂತೆ ಬರೆಯುವ ವಿಮರ್ಶಕರ ಎಂದಿನ ವರಸೆಯ ಅಭಿಪ್ರಾಯಕ್ಕೂ ತಡೆ ನೀಡಿದೆ. ಅಷ್ಟೊಂದು ಸುಲಭವಾಗಿ ಓದುಗನಿಗೆ ತಲುಪುವ ಮತ್ತು ಇಷ್ಟವಾಗುವ ಗುಣವನ್ನು ಪಡೆದುಕೊಂಡಿದೆ.

ನನ್ನಂತಹ ಯುವ ಬರಹಗಾರರನ್ನು ಸೆಳೆಯುವ ಪ್ರೀತಿಯ ಸಂಗತಿ ಎಂದರೆ ಅದು ಪ್ರೀತಿಯೇ. ಅಂತಹ ಪದ್ಯವನ್ನು ಸ್ವಭಾವತಹ ನಾನೂ ಒಬ್ಬ ಕವಿಯಾಗಿ ಇನ್ನೊಬ್ಬ ಕವಿಯ ನಿರೂಪಣೆಯ ಕವನದ ಮೂಲಕ ಓದಿನಲ್ಲಿ ಕಂಡುಕೊಳ್ಳವಾಗ ಕೆಲವೊಮ್ಮೆ ನನ್ನದೇ ಹೃದಯದ ಸಂವೇದನಾ  ಗುಣದಿಂದಾಗಿ ಇಷ್ಟವಾಗಿ ಮತ್ತೆ ಮತ್ತೆ ಓದಿಸಿಕೊಂಡು ಹೋಗುವ, ಅದನ್ನು ನನ್ನದೇ ಭಾವದಲ್ಲಿ ಆಲೋಚನೆ ಮಾಡುವ ಗೆಳೆಯರ ಎದುರಿಗಿಟ್ಟು ಓದಿಸುವ ಪ್ರೀತಿಗೆ ನಾನು ಹಲವು ಬಾರಿ ಧನ್ಯನು. ಅದೇ ಒಬ್ಬ ಯುವ ಕವಯತ್ರಿ ಬರೆದಿದ್ದಾರೆ ಎಂದುಕೊಂಡರೆ? ಭಾವಾಭಿವ್ಯಕ್ತಿಯ ಎದುರಿಗೆ ನಾನೇ ನಿಂತು ಅಥವಾ ಕುಂತು ಮುಖತಃ ಕೇಳಿಸಿಕೊಳ್ಳುತ್ತಿದ್ದೇನೇನೋ ಎಂಬಂತೆ ಪರಿಭಾವಿಸಿ ಅದನ್ನು ಆಸ್ವಾದಿಸುವ ಸಂವೇದನಾ ಗುಣಕ್ಕೆ ನಾನು ಎಂದೂ ಭಾವಬದ್ಧನು. ಹೀಗೆ ಕವಯತ್ರಿ ಶಶಿಯವರ ಕೆಲವು ಕವನಗಳು ನನ್ನಂತಹ ಸಹೃದಯವಂತನ ಗಮನ ಸೆಳೆದು ಭಾವಭಿತ್ತಿಯಲ್ಲಿ ಮುಗುಳ್ನಗೆಯ ಸ್ವಾಗತದ ಸಂಭ್ರಮಕ್ಕೆ ಮುನ್ನುಡಿ ಬರೆಯುವಂತಿವೆ. ಇಂಥದೊಂದು ಕವನ ಶಶಿಯವರ ಕವನ 'ದಿಬ್ಬಣ'ವನ್ನು ನಾನು ಓದತೊಡಗಿದಾಗ-

ನವಜೀವನದ ಮೆಟ್ಟಿಲೇರುತ್ತಾ
ಚಿತ್ತದಿ ಚಿತ್ರಸಹಿತ ಕನಸಕಟ್ಟಿ
ಪತಿಮಹಲಿಗೆ ಕಾಲಿಡಲು ಹೊರಟಿಹಳು
ತವರ ನೆನೆದು ಬಿಗುಮಾನದಿ
ಬೇಡೆಂದು ಬೇರೂರಲಾಗಿದೆ
ಮನಸಿಟ್ಟು ಮುಂದೆಹೋಗದೆ
ದಿಬ್ಬಣಸಾಗಿದೆ ದೂರದೂರಿಗೆ
ಮಮತೆಯ ಮಡಿಲು ತೊರೆದು
ತನ್ನವರ ತಬ್ಬಿ ಬಿಕ್ಕಳಿಸುತ
ತಡೆಯಲಾಗದೆ ಕಂಬನಿಜಾರಿಸಿ
ಕಡೆಗೂ ಹೊರಟಳು ಹೆತ್ತವರ ಸ್ಮರಿಸಿ.

ಆಹಾ! ಎಂತಹ ಸುಂದರ ಅನುಭವ ಮಂಟಪ. ತಾನು ಕಂಡ ಹೆಣ್ಣೊಬ್ಬಳ ಜೀವನದ ಬಗ್ಗೆ ತನ್ನನ್ನು ತಾನೇ ಭವಿಷ್ಯದ ದೃಷ್ಟಿಯಿಂದ ನೋಡಿದಾಗ ಹೊರಹೊಮ್ಮಿದ ಭಾವತೀರಯಾನವಾಗಿ ಕವನ ಅನಾವರಣಗೊಂಡಿದೆ.

ಹೆಣ್ಣಿನ ಮೌನವೇ ಒಂದು ಬೃಹತ್ ಸಮಗ್ರ ಕವನ ಸಂಕಲನದಂತೆ. ಅದರ ನೋವು ನಲಿವುಗಳ ಸವಿದು ನುಂಗಿದ ಭಾವಾಕೋಶದ ಚಿತ್ತಾರವನ್ನು ಗಂಡೊಬ್ಬ ನೋಡಿ ವರ್ಣಿಸುವ ಬದಲಿಗೆ ಅವಳದೇ ಹೆಣ್ಣಿನ ಹೆಣ್ತನದ ಅಭಿವ್ಯಕ್ತಿಯಲ್ಲಿ ಓದಿ ತಿಳಿದು ಗೌರವಿಸುವ ಪ್ರೀತಿಯ ಸಂಪ್ರೀತಿ ಭಾವದಲ್ಲಿ ಸಂತೃಪ್ತಿ ದೊರಕಿಸಲು ಪ್ರಯತ್ನ ಮಾಡಬೇಕು. ಇಂಥದೊಂದು ಅಪರೂಪದ ಅನುಭೂತಿ ಇದೆಯಲ್ಲ ಅದೇ ನಿಜವಾದ ಅರ್ಥದಲ್ಲಿ ಅಕ್ಷರ ಪ್ರಕಾಶನ. ಇದಕ್ಕೆ ಶಶಿಯವರ 'ಭಾವದ ಮಳೆ' ಪದ್ಯ ತುಂಬಾ ಸೊಗಸಾಗಿ ಮೂಡಿಬಂದಿದೆ.

ಕುಳಿತಿಹೆ ಸುಮ್ಮನೆ
ನೋಡುತ ಮೋಡವ
ನೆನಪಿನ ನೋವು
ಮೂಡುವ ವೇಳೆಗೆ
ಗುಡುಗಿತು ಬಾನು
ಸಣ್ಣನೆ ಸದ್ದಲಿ
ಬೀಸಿತು ಗಾಳಿಯು
ಭಾವದ ರೀತಿಲಿ
ಜಾರಿತು ಕಂಬನಿ
ಮಳೆಯ ಜೊತೆಯಲಿ.

ಥರದ ಹಲವು ಬಗೆಯ ಇಲ್ಲಿನ ಕವನಗಳು ಮನನೀಯವಾಗಿ ಚೆಂದದ ಬರಹವಾಗಿ ಹೊರಹೊಮ್ಮಿವೆ. ಮೊದಲ ಕವನ ಸಂಕಲವೇನೋ ನಿಜ. ಓದುಗರ ಮನಸ್ಸಿನಲ್ಲಿ 'ಚೊಚ್ಚಲ ಕೂಸು' ಹಡೆದ ತಾಯಿಯನ್ನು ಅಕ್ಕರೆಯಿಂದ ನೋಡಿಕೊಳ್ಳುವ ದೃಷ್ಟಿ ಇದ್ದೇ ಇರುತ್ತದೆ. ಆದರೆ ಇದು ಚೊಚ್ಚಲ ಹೆರಿಗೆಯ ಸಂದರ್ಭದಲ್ಲಿ ಕಾಣುವ ಸದಾಶಯಕ್ಕೆ ಸದಾ ನೆನಪಿನಲ್ಲಿ ಉಳಿಯುವ ಗುಣಕ್ಕೆ ತಕ್ಕ ಭಾವಚಿತ್ರ ಸಹಿತ ನೀಡಿರುವ ಒಂದೊಳ್ಳೆಯ ಉಡುಗೊರೆ ಎಂಬಂತಿದೆ. ಎಂದರೆ ಇಲ್ಲಿನ ಕವನಗಳು ಅಷ್ಟು ನವಿರಾದ ಭಾವವೊಂದು ಮೇಳೈಸಿದ ರಚನೆಗೆ ಪೂರಕವಾಗಿವೆ. ನಿಟ್ಟಿನಲ್ಲಿ ನನ್ನ ಅವಲೋಕನ ವಿಮರ್ಶಾ ಬರಹದ ಮೂಲಕ ಶಶಿಯವರಿಗೆ ಪ್ರೀತಿಯ ಶುಭಾಶಯಗಳನ್ನು ತಿಳಿಸುತ್ತೇನೆ.ಅದರಂತೆ ಒಬ್ಬ ಓದುಗನಾಗಿ ಅವರದೇ ಒಂದೊಳ್ಳೆಯ 'ಹೊಸ ವರುಷ' ಕವನವನ್ನು ಮತ್ತೊಮ್ಮೆ ಓದುತ್ತ ಬೆಳ್ಳಿ ಬೆಳಕಿನಿಂದ ಮುಂಬೆಳಕಿಗೆ ಸ್ವಾಗತಿಸಲು ಬಯಸುತ್ತೇನೆ.

ಕಳೆಯುತ್ತಿವೆ  ವರುಷಗಳೊಂದೊಂದಾಗಿ
ಮನುಜರು ಬಡಿದಾಡದೇ ಬಾಳಲಿ ಒಗ್ಗಟ್ಟಾಗಿ
ಅಳಿಸಿ ಹೋಗಲಿ ನರನ ದುಷ್ಟದ್ವೇಶವೆಲ್ಲವು
ಅಳಿಯದೆ ಉಳಿಯಲಿ ಮಾನವೀಯಗುಣವು
ಶಾಂತಿ ಪ್ರೀತಿಯ ನವಕಿರಣದ ಸ್ಪರ್ಶದಲಿ
ಎಳ್ಳುಬೆಲ್ಲದ ಸಿಹಿ ತಿನಿಸಲಿ
ನವನವೀನ ಗುರಿಗಳ ಸ್ವೀಕರಿಸುತಲಿ
ಅತ್ಯುತ್ತಮ ಯಶಸ್ಸನ್ನು ತಮ್ಮದಾಗಿಸಿಕೊಳ್ಳಲಿ
ಸೃಷ್ಟಿಯೇ ಚಿಗುರೊಡೆಯುತಿಹಳು ಹೊಸದಾಗಿ
ನವ ಸಂವತ್ಸರದ ತೋರಿಕೆಗಾಗಿ
ಹಳೆವರ್ಷ ಕಳೆಯಿತೆಂದು ಸಂದೇಶ ಸಾರುತಿಹಳು
ಅವಳ ಮೂಲಕವೂ ಹೊಸ ವರ್ಷದ ಶುಭಾಶಯಗಳು.



 







-ಡಾ.ಸಂಪತ್ ಬೆಟ್ಟಗೆರೆ