Saturday, 11 April 2026

ಬೆಟ್ಟಗೆರೆ ಮತ್ತು ಕಾಲಭೈರವ

ಬೆಟ್ಟಗೆರೆ ಮತ್ತು ಕಾಲಭೈರವ

(ವಿಶೇಷ ಲೇಖನ)


ಚಿತ್ರ: ಬೆಟ್ಟಗೆರೆಯ ಕಾಲಭೈರವನ ಆದಿಕಾಲದ ಮೂರ್ತಿ


ಬೆಟ್ಟಗೆರೆ ಮತ್ತು ಕಾಲಭೈರವ 
------------------------------------

ಮೂಡಿಗೆರೆ ತಾಲ್ಲೂಕಿನಲ್ಲಿ ಬಹುತೇಕ ಐತಿಹಾಸಿಕ ಸ್ಥಳಗಳು ಪ್ರಾಕೃತಿಕ ಹಾಗೂ ಪ್ರಾದೇಶಿಕ ಗುಣ ಲಕ್ಷಣಗಳಿಂದ ಮನನೀಯವಾಗಿ ಗಮನಸೆಳೆಯುವ ಮಹತ್ವ ಹೊಂದಿವೆ. ಇಂತಹ ವೈಶಿಷ್ಟತೆಯಿಂದ ನಮ್ಮೂರಿನ ಕಾಲಭೈರವ ದೇವಸ್ಥಾನ ಪುರಾತನ ಕಾಲದಿಂದಲೂ ಕೃಷಿ ಪ್ರಧಾನ ಸಾಂಸ್ಕೃತಿಕತೆಯನ್ನು ಮೈಗೂಡಿಸಿಕೊಂಡು ರೈತಾಪಿ ಜನರು ಆರಾಧಿಸುವ ಸಂಪ್ರದಾಯದ ಮೂಲಕ ಭಕ್ತಿಕೇಂದ್ರದಂತೆ ಭಾವಪ್ರಧಾನವೂ ಆಗಿದೆ.


ಚಿತ್ರ: ಈ ಭಾಗದ ಸಾಂಸ್ಕೃತಿಕ ಚರಿತ್ರೆಯ ಪರಿಚಯ ಕೃತಿ

ಇದಕ್ಕೆ ಪೂರಕವಾಗಿ ವಿವೇಚಿಸುವುದಾದರೆ ಬೆಟ್ಟಗೆರೆಯು ಬೆಟ್ಟ(ಎತ್ತರ) ಗೆರೆ (ಇಳಿಜಾರು) ಪ್ರದೇಶವನ್ನು ಒಳಗೊಂಡಂತೆ ರೂಪು ತಳೆದು ತಟ್ಟು (ಖುಷ್ಕಿ, ಬಾಗಾಯ್ತು) ಪ್ರದೇಶಗಳಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಏಲಕ್ಕಿ ಮುಂತಾದ ವಾಣಿಜ್ಯ ಬೆಳೆಗಳು, ತಗ್ಗಿನ (ತರಿ) ಗದ್ದೆಗಣ್ಣ ಭಾಗದಲ್ಲಿ  ಭತ್ತವನ್ನು ಬೆಳೆದುಕೊಂಡು ಬಂದಿರುವ ಒಂದು ಪುಟ್ಟ ಜನವಸತಿ ಪ್ರದೇಶ. 

ಕಾಲಭೈರವನು ಹುಟ್ಟು ಸಾವಿನ ನಡುವೆ ಬದುಕನ್ನು ಪ್ರತಿಬಿಂಬಿಸುವ ಸಾಂಕೇತಿಕವಾಗಿ ಕಂಡುಬರುತ್ತಾನೆ. ಸಮಯ(ಜೀವ/ಜೀವನ) ಮತ್ತು ಮೃತ್ಯು (ಸಾವು) ಈ ಎರಡಕ್ಕೂ ಕಾಲ ನಿರ್ಣಯಕನಂತೆ. ಇದನ್ನು ನಮ್ಮ ಭಾಗದ ಕೆಲವು ಹಿರಿಯರು ಹೇಳುವ ಕೆಲವು ಪೌರಾಣಿಕ ಕಥೆಗಳ ಮೂಲಕ ವಿವೇಚನೆ ಮಾಡುವುದಾದರೆ ಇವನು ಶಿವನ ಉಗ್ರಾವತಾರಿ. ಕಾಲವನ್ನು ನಿಯಂತ್ರಿಸುವನಾದುದರಿಂದ ಕಾಲಭೈರವನೆಂಬ ಎಂಬ ಹೆಸರಿನಿಂದ ಜನಪ್ರಿಯ. ಅದರಂತೆ ಈಗ ಭಕ್ತಕೋಟಿಯ ಮುಖೇನ ಈಶ್ವರತ್ವವನ್ನು ಅಂಟಿಸಿಕೊಂಡು ಭೈರವೇಶ್ವರನಾಗಿದ್ದಾನೆ. ಮುಖ್ಯವಾಗಿ ಶೂದ್ರ ಸಮುದಾಯದಿಂದ ಪೂಜನೀಯನಾದ ಈತ ಈ ಮೊದಲೇ ಹೇಳಿದಂತೆ ಉಗ್ರ ಸ್ವರೂಪಿ.

ಹೀಗೆ ಈ ಭೈರವನನ್ನು ಶಿವನು ಚತುರ್ಮುಖ ಬ್ರಹ್ಮನ ಅಹಂಕಾರವನ್ನು ಹತ್ತಿಕ್ಕಲು ತನ್ನ ಉಗುರಿನಿಂದ  ಸೃಷ್ಟಿ ಮಾಡಿದನು ಎನ್ನಲಾಗುತ್ತದೆ. ಅದರಂತೆ ಅವನು ತನ್ನ ಕೈಗಳಲ್ಲಿ ತ್ರಿಶೂಲ, ಡಮರು, ಪಾಶ ಜೊತೆಗೆ ಕಪಾಲ(ತಲೆಬುರುಡೆ) ವನ್ನು ಹಿಡಿದುಕೊಂಡು ನಾಯಿಯ ಮೇಲೆ ಕುಳಿತುಕೊಂಡಿರುವುದು ವಿಶೇಷವಾಗಿ ಕಾಣುತ್ತದೆ. ನಮ್ಮ ಬೆಟ್ಟಗೆರೆ ಗ್ರಾಮದಲ್ಲಿರುವ ಭೈರವನ ಮೂರ್ತಿಯ ಸ್ವರೂಪವನ್ನು ಬಹುತೇಕ ಇದೇ ದೃಷ್ಟಿಯಿಂದ ಗ್ರಹಿಸಬಹುದು. ಅದರಂತೆ ಸುತ್ತಮುತ್ತಲಿನ  ದೇವರಮನೆ, ಮರುಗುಂದ ಮುಂತಾದ ಪ್ರದೇಶಗಳಲ್ಲಿ ಭೈರವೇಶ್ವರನ ದೇವಾಲಯಗಳಿದ್ದು ಆ ಭೈರವೇಶ್ವರರು ಬೇರೆ ವಿಶೇಷಣಗಳಿಂದ ಕರೆಸಿಕೊಂಡಿದ್ದಾರೆ. ಆದರೆ ನಮ್ಮೂರು ಬೆಟ್ಟಗೆರೆ ಗ್ರಾಮದಲ್ಲಿರುವ ಭೈರವೇಶ್ವರ ಕಾಲಭೈರವನ ವೈಶಿಷ್ಟ್ಯತೆಯಲ್ಲೇ ಅಸ್ಮಿತೆಯನ್ನು ಕಂಡುಕೊಳ್ಳುವ ಮೂಲಕ ವಿಶೇಷ ಗಮನ ಸೆಳೆಯುತ್ತಿದೆ. ಅದರಂತೆ ಬೆಟ್ಟಗೆರೆ ವ್ಯಾಪ್ತಿಯ ಕೋಳೂರು ಸಾವಿರದ ಫಲ್ಗುಣಿ ಗ್ರಾಮದಲ್ಲಿ ಇರುವ ಕಲಾನಾಥೇಶ್ವರ ದೇವಾಲಯವು ತನ್ನ ಲಕ್ಷಣಗಳ ಮೂಲಕ ಹೊಯ್ಸಳ ಕಾಲದಲ್ಲಿ ನಿರ್ಮಾಣ ಅಥವಾ ಪುನಶ್ಚೇತನ ಆಗಿದೆ ಎಂಬುದನ್ನು ದೃಢಪಡಿಸಲು ಕೆಲವು ಅಧ್ಯಯನಗಳು ಸಾಕ್ಷಿ ಪುರಾವೆ ಒದಗಿಸಿವೆ. ಇಲ್ಲಿ ಕಲಾನಾಥ ಎಂಬಲ್ಲಿ 'ನಾಥ'ವು ನಾಥಪಂಥವನ್ನು ನೆನಪಿಸುತ್ತದೆ. ಅದರಂತೆ ನಮ್ಮ ಬೆಟ್ಟಗೆರೆಯ ಕಾಲಭೈರವನನ್ನೂ ಮುಂದೆ ನಾಥಪಂಥದ ಹಿನ್ನೆಲೆಯಲ್ಲೇ ಕಂಡುಕೊಂಡಿರುವುದು ತಿಳಿಯುತ್ತದೆ.

 

ಚಿತ್ರ: ಬೆಟ್ಟಗೆರೆ ಕಾಲಭೈರವನ ಗುಡಿಯ ನವ ವಿನ್ಯಾಸ 

ಹತ್ತನೆಯ ಶತಮಾನದ ಸುಮಾರಿಗೆ ರೂಪು ತಳೆದು ಬೆಳೆಯುತ್ತ ಬಂದ ನಾಥಪಂಥವು ಆಧ್ಯಾತ್ಮಿಕ ತಪಸ್ವಿಗಳು, ಲೌಕಿಕ ತಾತ್ವಿಕರನ್ನೂ ಒಳಗೊಂಡಂತೆ ಕಂಡುಬರುವ ವಿಶಿಷ್ಟ ಸಂಪ್ರದಾಯವಾಗಿ ಮೂಡಿಬಂದಿರುವುದು ಗೊತ್ತಾಗುತ್ತದೆ. ಈ ವಿಚಾರವನ್ನು ಈವರೆಗಿನ ಅಧ್ಯಯನದ ಓದುಗಳಿಂದ ಕಂಡುಕೊಳ್ಳಬಹುದಾಗಿದೆ. ಅದರಂತೆ ಆದಿನಾಥನಿಂದ ಮೊದಲುಗೊಂಡು ಒಟ್ಟು  ಒಂಭತ್ತು ನವನಾಥರವರೆಗೂ ನಾಥಪಂಥವು ಬೆಳವಣಿಗೆ ಹೊಂದಿರುವುದು ತಿಳಿಯುತ್ತದೆ. ಹೀಗೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ನಾಥಗುರುಗಳು ಪ್ರಮುಖ ಪಾತ್ರ ವಹಿಸುವ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಕೂಡ ಇವರುಗಳಲ್ಲಿ ಕೆಲವರು ಚಿಂತನೆ ಮಾಡಿರುವುದಿದೆ. ಗಮನಿಸಿದಂತೆ ಆದಿಚುಂಚನಗಿರಿ ಮಠವೂ ಕೂಡ ಈ ಪಂಥದ ಪ್ರಭಾವಕ್ಕೆ ಒಳಗಾಯಿತೆಂದು ಸಂಶೋಧನಾಮುಖಿ ಓದಿನ ಮೂಲಕ ನಾವೂ ಅರ್ಥಮಾಡಿಕೊಳ್ಳಬಹುದಾಗಿದೆ. ಎಂದರೆ ಈ ಮಠದ ಪ್ರಮುಖ ಸ್ವಾಮೀಜಿಗಳಲ್ಲಿ ಓರ್ವರಾಗಿದ್ದ ಬಾಲಗಂಗಾಧರನಾಥ ಅವರ ಹೆಸರಿನೊಂದಗಿನ 'ನಾಥ'ವೂ ಇದನ್ನೆ ಧ್ವನಿಸುತ್ತದೆಯಲ್ಲವೇ? ಈ ಹಿನ್ನೆಲೆಯೊಟ್ಟಿಗೆ ಬೆಟ್ಟಗೆರೆ ಭೈರವನನ್ನು ನಾಥಪಂಥವು ಕರ್ನಾಟಕದಲ್ಲಿ ಪ್ರಸಾರವಾದ  ಹಾಲಸಿದ್ಧನಾಥ, ಅಲ್ಲಮಪ್ರಭು ಮತ್ತು ಕಾಪಾಲಿಕ ಈ ಮೂರು ಪಂಥಗಳ ಪ್ರಮುಖ ನೋಟವಾಗಿ ಗಮನಿಸಿಕೊಳ್ಳಲೂ ಅವಕಾಶವಿದೆ.  ಅದರಂತೆ ಇದರಲ್ಲಿ ಯಾವುದರ ಪ್ರಭಾವ ಅಧಿಕವಾಗಿದೆ ಎಂದು ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಬಹುದಾದ ಎಲ್ಲಾ ಸಾಧ್ಯತೆಗಳೂ ಇರುವ ಲಕ್ಷಣಗಳೂ ಇದಕ್ಕಿದೆ. 


ಚಿತ್ರ: ಬೆಟ್ಟಗೆರೆ ಕಾಲಭೈರವನ ಗುಡಿಯ ಹೊಸ ರೂಪ 

ಅಂದಹಾಗೆ ಈಗ  ಪ್ರಮುಖವಾಗಿ ಬೇರೆ ಬೇರೆ ಭಾಗಗಳಲ್ಲಿ ಒಕ್ಕಲಿಗ ಸಮುದಾಯದವರೇ ಪ್ರಧಾನವಾಗಿ ಆರಾಧಿಸುವ ಭೈರವನಿಗೆ ಇಲ್ಲಿ ಹಾಗೆ ಪ್ರತ್ಯೇಕವಾಗಿ ಭೇದವೆಣಿಸದೆ ವಿವಿಧ ಸಮುದಾಯದವರಾದ ಕುಂಬಾರ, ಜೈನ, ಬ್ರಾಹ್ಮಣ, ಮಡಿವಾಳ, ಬಿಲ್ಲವ, ವಿಶ್ವಕರ್ಮ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಳಿಮೊಗಶೆಟ್ರು, ಪೂಜಾರ್ರು, ಜೋಗಿ, ವೀರಶೈವ ಲಿಂಗಾಯತ ಮುಂತಾದ ವೈವಿಧ್ಯತೆಯ ಒಟ್ಟಂದದ ಜನ ಸಮೂಹ ಪೂಜನೀಯವಾಗಿ ಭಾವಿಸಿ ಪೂಜಿಸುತ್ತಾ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬೆಟ್ಟಗೆರೆ ಗ್ರಾಮವೂ ಒಳಗೊಂಡಿರುವ ಕೋಳೂರು ಸಾವಿರ (ಹಲವು ಗ್ರಾಮಗಳ ಸಮೂಹಕ್ಕೆ ಈಗಿನ ಹೋಬಳಿ ಕೇಂದ್ರದಂತೆ ಆದೀಮ ಕಾಲದಲ್ಲಿ ಇದ್ದ ಹೆಸರು - ಸಾವಿರ)ದ ಸುಗ್ಗಿ ದೇವತೆ ಫಲ್ಗುಣಿ ಪದ್ಮಾವತಿ ಅಮ್ಮನವರ ಪ್ರಭಾವಳಿ, ಉತ್ಸವ ಮೂರ್ತಿಯನ್ನು ಇಡುವ ಸ್ಥಳವು ಕೂಡ ಇದೇ ಭೈರವೇಶ್ವನ ಗುಡಿ ಆಗಿರುವುದೂ ಮುಖ್ಯವಾಗಿ ತೋರುತ್ತದೆ. ಈ ದೇವತೆಗೆ ಜಾತಿ ಭೇದವಿಲ್ಲದೆ ಅನೇಕ ಮಂದಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಗೌರವವು ಈ ಕಾಲಭೈರವನಿಗೂ ಸಂದಿದೆ. 


ಚಿತ್ರ: ಕುವೆಂಪು ಅವರ ಕೃತಿ ಶೂದ್ರ ತಪಸ್ವಿ 

ಶೂದ್ರ ಸಮುದಾಯದಿಂದ ಬೆಳೆದು ಬಂದ ಕನ್ನಡದ ಪ್ರಮುಖ ಕವಿಗಳಾದ ಕುವೆಂಪು ಅವರು 'ಶೂದ್ರ ತಪಸ್ವಿ' ಅಂತ ನಾಟಕವೊಂದನ್ನು ರಚಿಸಿರುವುದು ಬಹುತೇಕರಿಗೆ ತಿಳಿದೇ ಇದೆ. ಆ ನಾಟಕ ಭಾಗದಲ್ಲಿ ಹೂವು ಕೊಯ್ಯಲು ಹೋದಾಗ ಬ್ರಾಹ್ಮಣ ಕುಮಾರನೊಬ್ಬನು  ಉಸಿರು ಚೆಲ್ಲಿದ ಸ್ಥಿತಿಯಲ್ಲಿ ಬಿದ್ದಿರುತ್ತಾನೆ. ಇದಕ್ಕೆ ಶೂದ್ರ ಶಂಭೂಕನು ತಪಸ್ಸು ಮಾಡುತಿದ್ದುದರ ದೋಷದಿಂದ ಈ ಹಾನಿ ಸಂಭವಿಸಿರುವುದು ಎನ್ನುವುದು ಆ  ಕುಮಾರನ ಪೋಷಕನಾಗಿದ್ದ ಮೂರ್ಖ ಬ್ರಾಹ್ಮಣನೊಬ್ಬನ ವಾದ.  ಅವನು ಶ್ರೀರಾಮನಿಗೆ ದೂರುಕೊಟ್ಟು ಶೂದ್ರ ತಪಸ್ವಿಯಾದ ಶಂಭೂಕನನ್ನು ಕೊಲ್ಲುವಂತೆ  ಬೇಡಿಕೆ ಇಟ್ಟಾಗ, ಶ್ರೀರಾಮ  ಹಾಗೆ ಮಾಡದೇ ವಿದ್ಯೆ ಶೂದ್ರರಿಗೆ ಸಲ್ಲದು ಎಂದು ಅಧರ್ಮದಿಂದ ಪರಿಭಾವಿಸಿದ ಮೂರ್ಖ ಬ್ರಾಹ್ಮಣನಿಗೇ ಪ್ರಾಯೋಗಿಕವಾಗಿ ತಿಳುವಳಿಕೆ ಮೂಡಿಸುವ ಮೂಲಕ ಜೀವನ ಪ್ರೀತಿಯ ಬಗ್ಗೆ ಶ್ರೀರಾಮ ಅರಿವು ಮೂಡಿಸುವಂತೆ ಕುವೆಂಪು ದರ್ಶನಾತ್ಮಕವಾಗಿ ನಾಟಕವನ್ನು ಅನಾವರಣ ಮಾಡಿದ್ದಾರೆ. ಅದರಂತೆ ಶೂದ್ರ ತಪಸ್ವಿಗೆ ಶ್ರೀರಾಮ ತಾನೂ ಸಹಿತ ಗೌರವಿಸಿ ವಿದ್ಯೆಯೇ ನಿಜವಾದ ಪ್ರೀತಿ, ಅರ್ಹತೆಯಾಗಿದೆ. ಜಾತಿಯಲ್ಲ ಎಂಬುದನ್ನು ಸಾಬೀತು ಮಾಡಿದಂತೆ ಚಿತ್ರಣವಿದೆ. ಇದು ಕುವೆಂಪುರವರ ಜಾತ್ಯಾತೀತ ದೃಷ್ಟಿಕೋನಗಳ ಮನುಜಮತ ವಿಶ್ವಪಥದ ಕೊಡುಗೆ. ಪೌರಾಣಿಕ ಕಥೆಯ ಎಳೆಯನ್ನು ಇಟ್ಟುಕೊಂಡು ಸಮಕಾಲೀನವಾಗಿ ಹೀಗೆ ಶೂದ್ರತಪಸ್ವಿ ನಾಟಕವನ್ನು ವಿಶೇಷವಾಗಿ ಕಟ್ಟಿಕೊಡುವ ಕುವೆಂಪುರವರು ಈ ನಾಟಕದ ಆರಂಭದಲ್ಲಿ ಶಂಭೂಕ ಹಾಗೂ ಅವನ ತಾಣವನ್ನು ಕಾಯುವ ಕ್ಷೇತ್ರಪಾಲಕನನ್ನಾಗಿ ಭೈರವನನ್ನು ಪರಿಕಲ್ಪನೆಗೆ ತಂದುಕೊಂಡಿದ್ದಾರೆ. ಆತನನ್ನು ಪ್ರಾಕೃತಿಕ ಸಂಕೇತವಾಗಿ ಬೃಹತ್ ಹೆಮ್ಮರವಾಗಿ ರೂಪಿಸಿ ವೃಕ್ಷಭೈರವ ಎಂದು ಹೆಸರಿಸಿದ್ದಾರೆ. ಆತನು ಮೃತ್ಯುದೇವತೆಯ ಜೊತೆಗೂಡಿ ಶಂಭೂಕನ ತಪಸ್ಸನ್ನು ಕಾಯುವ ಚಿತ್ರಾತ್ಮಕ ವಿವರಣೆಯೇ ವಿಶೇಷವಾಗಿದೆ. ಆ ವಿಶೇಷ ನಾಟಕದಂತೆಯೇ ನನ್ನೂರಿನ ಜಾನಪದೀಯ ಹಿನ್ನೆಲೆಯ ಜೊತೆಗೆ ಐತಿಹಾಸಿಕ ಸಂಸ್ಪರ್ಶ ಇರುವ ಈ ಭೈರವನನ್ನೂ ಈಗ ವಿವೇಚನೆಗೆ ತಂದುಕೊಂಡರೆ ಈತನು ಕೂಡ ಯಾವುದೇ ಒಂದು ಸಮುದಾಯದ ಆಚರಣೆಗೆ ಕಟ್ಟುಬೀಳದೆ ಎಂದಿನಂತೆ ಗ್ರಾಮದ ಬಹುಸಮುದಾಯದ  ಹಿತಚಿಂತಕನಾಗಿ ಇರಬೇಕೆಂದು ಗ್ರಾಮಸ್ಥರು ಅಭಿಮಾನದಿಂದ ಹೇಳಿಕೊಳ್ಳುವ ಪರಿಯನ್ನು ಗಮನಿಸಿದರೆ ತುಂಬಾ ಖುಷಿ ಆಗುತ್ತದೆ. 

ಈ ಭೈರವೇಶ್ವರನ ಗುಡಿಯು ಇದ್ದ ಬೆಟ್ಟಗೆರೆಯ ಸುತ್ತಲಿನ ಪ್ರದೇಶವನ್ನು 'ಭೈರವನಕೋಟೆ' ಎಂದು ಕರೆಯಲಾಗುತ್ತದೆ. ವೇಣೂರಿನ ಭೈರವರಸ ಇಲ್ಲಿ ಬಂದು ಕೋಟೆ ಕಟ್ಟಲು ಪ್ರಯತ್ನಿಸಿದ್ದನು ಎಂದು ಹಿರಿಯರು ಅಭಿಪ್ರಾಯಪಡುವುದುಂಟು. ಅದಕ್ಕೆ ಇಲ್ಲಿಗೆ ಈ ಹೆಸರು ಬಂದಿರಬಹುದೇ? ಎಂಬುದು ಹಿರಿಯರ ಚರ್ಚೆಯ ಅಭಿಪ್ರಾಯ ಕೂಡ. ಆದರೆ ಇದಕ್ಕೆ ಪೂರಕ ಪುರಾವೆಗಳಿಲ್ಲ. ಮೌಖಿಕ ಚರಿತ್ರೆಯೇ ಆಧಾರ. ಅದರಂತೆ ಇಲ್ಲೇ ಸಮೀಪ ಹೊಸಕೋಟೆ ಎಂಬ ಸ್ಥಳ ಇರುವುದರಿಂದ ಕೋಟೆ ಕಟ್ಟುವ ಪ್ರಯತ್ನಗಳು ಒಂದು ಕಾಲಘಟ್ಟದಲ್ಲಿ ಇಲ್ಲಿ ನಡೆದಿದ್ದವು ಎಂಬುದೆಂತು ದಿಟ.



ಚಿತ್ರ: ಬೆಟ್ಟಗೆರೆ ಕಾಲಭೈರವನ ಹಳೆಯ ಗುಡಿ

ಇಂತಹ ಪ್ರಾಚೀನ ಪರಂಪರೆಯನ್ನು ಹೊಂದಿರುವ ಈ ಭೈರವನ ಗುಡಿಯು ಮಳೆ, ಗಾಳಿಗೆ ಸಿಕ್ಕು ಬಹುಪಾಲು ಶಿಥಿಲಗೊಂಡ ಅವ್ಯವಸ್ಥೆಗೆ ಮೂಕಸಾಕ್ಷಿ ಆಗಿತ್ತು. ಇದನ್ನು ಮನಗಂಡ ಬೆಟ್ಟಗೆರೆಯ ಗ್ರಾಮಸ್ಥರುಗಳು ಊರಿನವರ ಹಾಗೂ ಸ್ಥಳೀಯರ ಪರಸ್ಪರ ಆರ್ಥಿಕ ಮತ್ತು ಸಂಪನ್ಮೂಲಗಳ ನೆರವಿನೊಂದಿಗೆ ಗುಡಿಯ ಜೀರ್ಣೋದ್ಧಾರ ಕಾರ್ಯ ಮತ್ತು ಪುನರ್ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು 2026ರ ಏಪ್ರಿಲ್ 8,9,10 ರಂದು ನೇರವೇರಿಸುವಲ್ಲಿ ಯಶ ಪಡೆದಿದ್ದಾರೆ. ಅಂದಹಾಗೆ ಮೂಲತಃ ಉಗ್ರಾವತಾರಿ ಮೂಲಸ್ವರೂಪಿ ಭೈರವನಿಗೂ ಈಗ ಅವ್ಯಕ್ತ ಸಂತಸ, ಸಂಭ್ರಮ. ಆ ಮಂದಸ್ಮಿತೆಯನ್ನು ಕಣ್ತುಂಬಿಕೊಳ್ಳುವುದೇ ಗ್ರಾಮಸ್ಥರಿಗೆ ಹೃದಯಂಗಮವಾಗಿದೆ. 


-ಚಿತ್ರ ಲೇಖನ:
ಡಾ.ಸಂಪತ್ ಬೆಟ್ಟಗೆರೆ, 
ಕನ್ನಡ ಉಪನ್ಯಾಸಕರು ಮತ್ತು ಲೇಖಕರು 





ವಿಡಿಯೋ/ಚಿತ್ರ: 
ಬೆಟ್ಟಗೆರೆ ಜಾನಪದ ಕಲಾವಿದ ಪದ್ಮಯ್ಯ ಮತ್ತು ಸಂಗಡಿಗರು ಮಲೆನಾಡಿನ ವಿಶೇಷ ವಾದ್ಯಗಳಾದ ನಿಶಾನಿ, ಮೋರಿ,  ವಾಲಗವನ್ನು ಭೈರವನ ಉತ್ಸವದ ದಿನ  ನುಡಿಸುತ್ತಿರುವುದು. 

Friday, 20 February 2026

ನಮ್ಮ ಬದುಕಿನ ಮಕ್ಕಳಾಟದ ಹೃದಯ ನೋಟ

ನಮ್ಮ ಬದುಕಿನ ಮಕ್ಕಳಾಟದ ಹೃದಯ ನೋಟ 
-ಡಾ.ಸಂಪತ್ ಬೆಟ್ಟಗೆರೆ 
ಚಿಕ್ಕಮಗಳೂರು ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆ ಮಾಣಿಕ್ಯ ಧಾರಾ 2024-25ರಲ್ಲಿ ಪ್ರಕಟವಾದ ನನ್ನ ರಚನೆಯ ಲೇಖನ. ನಿಮ್ಮೆಲ್ಲರ ಪ್ರೀತಿಯ ಓದಿಗಾಗಿ ಇಲ್ಲಿ. ಲೇಖನ ಸ್ವೀಕರಿಸಿ ಪ್ರಕಟಿಸಿದ  ಸಂಪಾದಕರಾದ ನಸ್ರೀನ್ ಬಾನು ಮೇಡಂ ಅವರಿಗೆ ಆತ್ಮೀಯ ಅಭಿವಂದನೆಗಳು. 








 

Saturday, 18 October 2025

ಎಸ್.ಎಲ್.ಭೈರಪ್ಪನವರ ಭಾವಭಿತ್ತಿ

ಎಸ್.ಎಲ್.ಭೈರಪ್ಪನವರ ಭಾವಭಿತ್ತಿ

ಕನ್ನಡದ ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಕುರಿತಂತೆ ನಾನು ಬರೆದಿದ್ದ ವಿಶೇಷ ಲೇಖನ 'ಕಸ್ತೂರಿ' ಮಾಸಿಕದ ನವೆಂಬರ್ ತಿಂಗಳ  2025ರ ಸಂಚಿಕೆಯಲ್ಲಿ ಪ್ರಕಟವಾಗಿದ್ದನ್ನು ನಿಮ್ಮೆಲ್ಲರ ಪ್ರೀತಿಯ ಬಿಡುವಿನ ವೇಳೆಯ ಓದಿಗಾಗಿ  ಇಲ್ಲಿ ನೀಡಲಾಗಿದೆ. 

(ಓದಿನ ಸ್ಪಷ್ಟತೆಗೆ ಪ್ರತಿ ಲೇಖನದ  ಫೋಟೋ ಪೇಜ್ ಮೇಲೆ ಟಚ್ ಮಾಡಿ ನೋಡಿರಿ ಜೂಮ್ ನಲ್ಲಿ ಹೊಂದಿಸಿಕೊಂಡು ಓದಿರಿ.) 

















Tuesday, 7 October 2025

ತಂದೆ ವಾಲ್ಮೀಕಿ ಧನ್ಯೆ ಜಾನಕಿ!

 -ಕವನ-

 ತಂದೆ ವಾಲ್ಮೀಕಿ ಧನ್ಯೆ ಜಾನಕಿ!















ಆದಿಕವಿ 
ಭಾರತದ ವಾಲ್ಮೀಕಿ 
ಜನಕನ ಮಗಳು
ಜಾನಕಿ
ಅವನ ಪ್ರೀತಿಯ ಕಾವ್ಯಕ್ಕೆ 
ಕಥಾ ನಾಯಕಿ!

ಜಾನಕಿ ಪತಿ ಶ್ರೀರಾಮನ ಉದಾಹರಣೆ ಇಲ್ಲಿದೆ 
ಅದಕ್ಕೊಂದು ಹೆಸರು ಮೂಡಿದೆ ಅದೇ ರಾಮಾಯಣ!
ಅವನೊಬ್ಬ ಲಂಕಾ ರಾವಣ
ಅವನಿಂದ 
ಜಾನಕಿಯ ಅಪಹರಣ!
ಹೋರಾಟ ನಡೆಸಿ 
ಆಕೆಯ ಬಿಡಿಸಿ 
ಹೀಗೆ ವನವಾಸ 
ಹಾಗೆ ಅಜ್ಞಾತವಾಸ
ಎಲ್ಲಾ ಮುಗಿಸಿ.. 
ಗರ್ಭಿಣಿ ಜಾನಕಿ ಮತ್ತೆ ಕಾಡಿಗೆ
ಹೀಗೆ ಹೃದಯಕ್ಕೆ ಸಂಬಂಧಿಸಿದೆ ಇದು ಓದಿಗೆ!
ವಾಲ್ಮೀಕಿ ಆಶ್ರಯದಲ್ಲಿ ಅವಳಿಗೆ ನೋವಿನ ಹೆರಿಗೆ
ಜನನಿ ಜಾನಕಿ ಮತ್ತೆ ಮತ್ತೆ ಹೀಗೆ ಜಾನಕಿ.. ಬರವಣಿಗೆಗೆ! 
ಹಾಗೆ ಮಹಾಕಾವ್ಯ ರಾಮಾಯಣ 
ಒಂದು ಸಾಂಸಾರಿಕ ಬದುಕಿನ ಪಯಣದ ಅನಾವರಣ! 
  
ಇಂದು ಕವಿ ಗೌರವದ ವಾಲ್ಮೀಕಿ ಜಯಂತಿ  ಆಚರಣೆ 
ಈ ಕಾವ್ಯ ಓದಿದವರು ಕೆಲವೇ ಜನ ಮಾತ್ರವಿಲ್ಲಿ ಜಾಣೆ! 
ಆದರೆ  ಅವರ ಮಾತುಕತೆ ಭಾಷಣ 
ಒಬ್ಬೊಬ್ಬರದು ಒಂದೊಂದು  ವಿಮರ್ಶೆಯ ನವಬಾಣ! 
"ವಾಲ್ಮೀಕಿ ಹಾಗಂತೆ ಹೀಗಂತೆ..." 
ಅವೆಲ್ಲ ಈಗ ಯಾಕಂತೆ!?
'ವಾಲ್ಮೀಕಿ ಒಬ್ಬ ಕವಿ' ನಮಗಿಷ್ಟೇ ಈಗ ಸಾಕಂತೆ. 
ಉಳಿದಂತೆ... 
ನಾವೆಲ್ಲಾ 'ರಾಮಾಯಣ' ಕಾವ್ಯ  ಓದಿ ತಿಳಿದಂತೆ 
ವಾಲ್ಮೀಕಿ ಪ್ರಾಣಭಾವಕ್ಕೂ ತುಂಬಾ ಖುಷಿಯಂತೆ! 
ಹೀಗೆ ಸಾಹಿತ್ಯ ಚರಿತ್ರೆಯಲ್ಲಿ ಆತ 
ನಮ್ಮ ಕವಿಗಳ ಮುತ್ತಾತ.. 
ಮತ್ತೇ? 
ಜವಾಬ್ದಾರಿ ತಂದೆ,ಧನ್ಯಳು ಆ ಸೀತೆ!
-ರಚನೆ: ಡಾ.ಸಂಪತ್ ಬೆಟ್ಟಗೆರೆ




 


Saturday, 27 September 2025

ಮೂಡಿಗೆರೆ ಸ್ಥಳನಾಮಗಳು

ಮೂಡಿಗೆರೆ ಸ್ಥಳನಾಮಗಳು 

ವಿಶೇಷ ಲೇಖನ: ಲೇಖಕರು: ಡಾ.ಸಂಪತ್ ಬೆಟ್ಟಗೆರೆ 

2007 ರಲ್ಲಿ ಮೂಡಿಗೆರೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ 'ಹೊಯ್ಸಳ ಸಿರಿ'ಯಲ್ಲಿ ನಾನು ಬರೆದಿದ್ದ ವಿಶೇಷ ಲೇಖನ "ಮೂಡಿಗೆರೆ ಸ್ಥಳನಾಮಗಳು" ಇಲ್ಲಿ ನಿಮ್ಮ ಪ್ರೀತಿಯ ಓದಿಗಾಗಿ ಒದಗಿಸಿದ್ದೇನೆ. ಓದಿ ಅನಿಸಿಕೆ ತಿಳಿಸಿ. ಆಗ ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಲೇಖನವಿದು ಎಂಬ ವಿನಯ ಮತ್ತು ಪ್ರೀತಿಯ ಆಂತರ್ಯವನ್ನು ಇದು ಮೈಗೂಡಿಸಿಕೊಂಡು ಒಡಮೂಡಿರುತ್ತೆ ಎಂಬ ಪರಿಕಲ್ಪನೆ ನಿಮ್ಮ ಓದಿನ ವಿಮರ್ಶೆಯಲ್ಲಿರಲಿ ಎಂಬುದು ನನ್ನ ಆತ್ಮೀಯ ಸದಾಶಯವಾಗಿದೆ. 































ಮೂಡಿಗೆರೆಯ ಕೆಲವು ಊರುಗಳ ಮಾರ್ಗಸೂಚಿ ಉದಾಹರಣೆಗೆ ಮಾದರಿಯ ಸಾಂದರ್ಭಿಕ ಛಾಯಾಚಿತ್ರ. 

(ಲೇಖನದ ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋ ಪೇಜ್ ಮೇಲೆ ಟಚ್ ಮಾಡಿ ನೋಡಿರಿ. ಜೂಮ್ ಮಾಡಿ ಓದಿರಿ.)

(ಗಮನಿಸಿ: ಮೂಲ ಲೇಖಕರ ಪೂರ್ವಾನುಮತಿ ಇಲ್ಲದೆ ಈ ಲೇಖನವನ್ನು ನಕಲು ಮಾಡುವಂತಿಲ್ಲ.ಡಾ.ಸಂಪತ್ ಬೆಟ್ಟಗೆರೆ. ಮೊ:935305706 7)



Friday, 12 September 2025

ಕವನ: ಗುಂಪುಗಾರಿಕೆ! -ರಚನೆ:ಡಾ.ಸಂಪತ್ ಬೆಟ್ಟಗೆರೆ

-ಕವನ-

ಗುಂಪುಗಾರಿಕೆ!

ಟೀಚರ್ಸ್ ಮತ್ತು ವಿದ್ಯಾರ್ಥಿಗಳ ಸಾಂದರ್ಭಿಕ ಚಿತ್ರ.(ಚಿತ್ರಕೃಪೆ:ಇಂಟರ್ನೆಟ್)

ಪಾದ್ರಿ ನಿಂತಿದ್ದರು 
ಅವರ ಸುತ್ತಲೂ ಕ್ರಿಶ್ಚಿಯನ್ನರು!
ಮೌಲ್ವಿ ನಿಂತಿದ್ದರು 
ಅವರ ಸುತ್ತಲೂ ಮುಸ್ಲಿಮರು!
ಸ್ವಾಮಿಗಳು ನಿಂತಿದ್ದರು 
ಅವರ ಸುತ್ತಲೂ ಹಿಂದೂ ಸಮುದಾಯದವರು! 
ಹೀಗೆ ಆಯಾ ಧರ್ಮದ ಗುರುಗಳು ಮತ್ತು ಜನರು
ಬೇರೆ ಬೇರೆ ಗುಂಪು ಗುಂಗಿನಲ್ಲಿ ಪ್ರತ್ಯೇಕರು! 

ನಮ್ಮ ಕನ್ನಡ ಗೌರ್ಮೇಂಟ್ ಶಾಲೆಯ ಶಿಕ್ಷಕರು 
ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿ ಹಂಚುತಿದ್ದರು! 
ಅವರ ಜಾತಿ, ಧರ್ಮ ಅದಾವುದೋ, ಮುಗುಳ್ನಕ್ಕರು
ನಂಗೂ ಒಂದ್ ಮೈಸೂರು ಪಾಕ ಕೈಗಿತ್ತು ನೋಡಿದರು! 
ಎಲ್ಲಾ ವಿದ್ಯಾರ್ಥಿಗಳು ಅಭೇದವಾಗಿ ಸಾಲಗಿ ನಿಂತರು
ಕೆಲವರು ಮಂಡಿಯೂರಿ ಕುಳಿತು ಫೋಟೋ ತೆಗೆದರು! 
ಸರ್ವ ಜನಾಂಗದ ಶಾಂತಿತೋಟ ನಾಡಗೀತೆ ನುಡಿದರು
ಎಲ್ಲರೂ ಹಾಗೇ ಜನಗಣಮನ ರಾಷ್ಟ್ರಗೀತೆ ಹಾಡಿದರು!

ಹೀಗೆ ಮಕ್ಕಳು ಶಿಕ್ಷಕರು
ಕನ್ನಡ ಶಾಲೆಯೇ ನಿಜವಾದ ಬಂಧು ಬಳಗದ ತವರು!
ಹಾಗೇ ಅಕ್ಕರೆ ಸಕ್ಕರೆಯ ಅಕ್ಷರ ಕಲಿತವರು 
ಮತ್ತೇಕೋ ಗೊತ್ತಿಲ್ಲ! ಪ್ರತ್ಯೇಕ ಗುಂಪಾಗಿ ಚದುರಿದರು! 

ನಮ್ಮ ಶಿಕ್ಷಕರು 
ಈಗ ನಿವೃತ್ತರು 
ಈ ಪ್ರಯುಕ್ತ ಅವರೀಗ ಸನ್ಮಾನಿತರು 
ಈ ಸನ್ಮಾನ ಮಾಡುತ್ತಿರುವರು
ಅವರದೇ ಜಾತಿ ಧರ್ಮವರು
ಅದೇ ಆ ನಮ್ಮ ಮೇಷ್ಟರು 
ನೋಡಿ ಜಾತಿಧರ್ಮದೊಳಗೇ ಪ್ರತ್ಯೇಕರಾಗಿದ್ದವರು
ಆದರೆ ಅವರು ವೃತ್ತಿ ಜೀವನದಲ್ಲಿ ಮಾತ್ರ ಜಾತ್ಯಾತೀತರು?
ಈಗ ನಿವೃತ್ತಿಯಲ್ಲಿ ಅವರ ಸಮುದಾಯದ ಶ್ರೇಷ್ಠ ಸಾಧಕರು 
ಅದಕ್ಕೀಗ ಅವರ ವಿದ್ಯಾರ್ಥಿಗಳಿಗೂ ತುಂಬಾ ಬೇಜಾರು! 
ಇಲ್ಲಿಯವರೆಗೆ ನಮ್ಮ ಗುರುಗಳು ನಮ್ಮವರಾಗಿದ್ದರು
ಈಗ ಮತ್ತೆ ಬೇರೆ ಹೋದರು! 
ಹೋದರೆ ಹೋಗಲಿ ನಾವು ಅವರ ಹಾಗೇ ಸಾಗುವವರು-
ಎಂದು ಅವರದೇ ಧರ್ಮ ಜಾತಿಯೊಳಗೆ ಸೇರಿಕೊಂಡರು!

ಹೀಗೆ 'ಮಾನವ ಜಾತಿ ತಾನೊಂದೆ ವಲಂ' ಪಂಪರು
'ವಿಶ್ವಮಾನವ' ಕುವೆಂಪುರವರು
'ಕುಲ ಕುಲವೆಂದು ಹೊಡೆದಾಡದಿರಿ' ಎಂದ ಕನಕದಾಸರು
'ಜ್ಯೋತಿ ಯಾವ ಜಾತಿಯಮ್ಮ..' ಹಾಡಿದ ಪುರಂದರು
ಪಾಠ, ಪಠ್ಯ, ಉಪನ್ಯಾಸದ ಪ್ರೋಗ್ರಾಂಗೆ ಮೀಸಲಾದರು
ನಮ್ಮ ಮೇಷ್ಟರು ಅದೇ ಎಷ್ಟು ಚಂದ ಬೋಧಿಸುತ್ತಿದ್ದರು! 
ಬಸವ, ಬುದ್ಧ, ವಿವೇಕಾನಂದರು, ಸಂತ ಕಬೀರರು
ಶರೀಫರು, ಗೋವಿಂದ ಭಟ್ಟರು,  ತೆರೆಸಾರು, ಕಲಾಂರು
ಬರೀ ಹೇಳಲಿಲ್ಲ ಬದುಕಿ ಕೂಡ ತೋರಿಸಿಕೊಟ್ಟಿದ್ದರು
ನಾವು ಮತ್ತೆ ಮೇಷ್ಟರಂತೆ ಗುಂಪು ಸೇರಿ ಚೂರಾದವರು! 

-ರಚನೆ:ಡಾ.ಸಂಪತ್ ಬೆಟ್ಟಗೆರೆ
 

Thursday, 28 August 2025

"ಅಮ್ಮ ಕಲಿಸಿದ ಆ ಪಾಠ" ವಿಶೇಷ ಲೇಖನ, "ಅಮ್ಮ ಗುಮ್ಮ" ಕವನ

"ಅಮ್ಮ ಕಲಿಸಿದ ಆ ಪಾಠ" 

ವಿಶೇಷ ಲೇಖನ

ಪ್ರಜಾವಾಣಿ ಭೂಮಿಕಾದಲ್ಲಿ ಪ್ರಕಟಿತ 


"ಅಮ್ಮ ಗುಮ್ಮ" ಕವನ  

 ಅಮ್ಮನ ಹುಟ್ಟುಹಬ್ಬಕ್ಕೆ ಬರೆದ ವಿಶೇಷ ಕವನ