ಬಸವಣ್ಣನವರ ಜನಸಾಮಾನ್ಯತೆ
- ಡಾ.ಸಂಪತ್ ಬೆಟ್ಟಗೆರೆ
ಕನ್ನಡ ಸಾಹಿತ್ಯದ ಆರಂಭಿಕ ಕಾಲಘಟ್ಟವು ಅದೆಷ್ಟೇ ಪ್ರಜಾಪ್ರಭುತ್ವದ ವಿಚಾರಗಳನ್ನೂ ಪ್ರತಿಪಾದಿಸಿದೆ ಎಂದು ವಿವೇಚಿಸಿದರೂ ಅದರ ಹೆಚ್ಚಿನ ಭಾಗ ಉಸಿರಾಡಿದ್ದು ಮಾತ್ರ ರಾಜಪ್ರಭುತ್ವದ ಆಸರೆಯಲ್ಲಿಯೇ. ಇದನ್ನು ಭಾಷೆಯಿಂದ ನೋಡುವುದಾದರೆ ಸಂಸ್ಕೃತ ಮಿಶ್ರಿತ ಹಳೆಗನ್ನಡವು ಅದು ರಾಜಾಶ್ರಿತ ಪಂಡಿತರನ್ನು ಸೆಳೆಯುವ ಪಾಂಡಿತ್ಯಪೂರ್ಣತೆಯನ್ನು ತನ್ನ ಮುಖ್ಯ ಸ್ಥಾಯಿಯಾಗಿರಿಸಿಕೊಂಡಿದ್ದಿತು. ಅದರಂತೆ ಕನ್ನಡದ ಮೊಟ್ಟಮೊದಲ ಲಾಕ್ಷಣಿಕ ಹಾಗೂ ಅಲಂಕಾರಿಕ ಗ್ರಂಥ ಎನಿಸಿಕೊಂಡಿರುವ ಶ್ರೀವಿಜಯನ ‘ಕವಿರಾಜಮಾರ್ಗವು ತನ್ನ ಹೆಸರಿನಲ್ಲಿಯೇ ‘ರಾಜ’ನನ್ನು ಹೃದಯವಾಗಿರಿಸಿಕೊಂಡಿರುವುದು ಗೊತ್ತಾಗುತ್ತದೆ. ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕಾಲಮಾನದ ಇದರ ಕವಿಗೆ ಕವಿತ್ವದ ವಿಚಾರದಲ್ಲೂ ಇನ್ನೂ ಸೂಕ್ತ ಸ್ವತಂತ್ರ ಸ್ಥಾನಮಾನ ದೊರೆತಿಲ್ಲ. ಕಾರಣ ಕವಿರಾಜ ಮಾರ್ಗದ ರಚನಾಕಾರನು ರಾಜ ಅಮೋಘವರ್ಷ ನೃಪತುಂಗನಾ? ಅಥವಾ ಆತನ ಆಸರೆಯಲ್ಲಿದ್ದ ಶ್ರೀವಿಜಯನಾ? ಎಂಬ ಗೊಂದಲದ ಚಿಂತನೆಗಳಲ್ಲಿ ನಮ್ಮ ಸಾಹಿತ್ಯ ಚರಿತ್ರಕಾರರು ತೊಳಲಾಡುತ್ತಲೇ ಇದ್ದಾರೆ. ಇದು ಎಲ್ಲಿಗೆ ಬಂದು ನಿಂತಿದೆ ಎಂದರೆ ನಮ್ಮ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡುವ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಗಳಲ್ಲಿ ಕವಿರಾಜ ಮಾರ್ಗದ ಕರ್ತೃ ಯಾರೆಂಬ ಪ್ರಶ್ನೆಗೆ ಉತ್ತರವು ಎರಡೂ ಸರಿ ಎಂಬುವುದು. ಇದರಿಂದ ಪರೀಕ್ಷೆ ನಡೆಸುವ ಸಂಸ್ಥೆ, ಪ್ರಾಧಿಕಾರ, ಆಯೋಗದವರು ಬಹುತೇಕ ಸಂದರ್ಭದಲ್ಲಿ ಈ ಯಾರೆಂಬ ನಿಖರ ಮತ್ತು ಸ್ಪಷ್ಟ ಉತ್ತರವು ವಿಷಯ ತಜ್ಞರಿಂದ ನಿರೀಕ್ಷೆಯಂತೆ ದೊರಕದೇ ಇದ್ದಾಗ ‘ಗ್ರೇಸ್ ಅಂಕ’ ಗಳನ್ನು ಕವಿ ಹಾಗೂ ರಾಜ ಇಬ್ಬರಿಗೂ ನೀಡಿ ಸುಮ್ಮನಾಗುವುದನ್ನೂ ಕಂಡಿದ್ದೇವೆ.
ಆದರೆ ಕವಿರಾಜಮಾರ್ಗದ ನಿಜವಾದ ರಚನಾಕಾರ ಎಂದು ನಾವೆಲ್ಲರೂ ಒಮ್ಮತದಿಂದ ಒಪ್ಪಬೇಕಾದ ಶ್ರೀವಿಜಯನು ಕೆಲವು ವಿದ್ವಾಂಸರ ಚಿಂತನೆಯಂತೆ ಆಶ್ರಯದಾತ ರಾಜನಾದ ಅಮೋಘವರ್ಷನ ಸಹ ಲೇಖಕ ಎಂದು ಬಿಂಬಿತನಾಗಿರುವುದೂ ಇದೆ. ಆದರೆ ಅದನ್ನು ಗಮನಿಸಿದಾಗ ಇದರ ರಚನಾಕಾರ ಶ್ರೀವಿಜಯನೇ ಎಂಬುವುದು ಸ್ಪಷ್ಟವಾಗುತ್ತದೆ. ಏಕೆಂದರೆ ರಾಜ ತನ್ನನ್ನು ತಾನೇ ಹೇಳಿಕೊಂಡು ನೋಡುಗರ ಆಂತರ್ಯದಲ್ಲಿ ಸಣ್ಣವನಾಗದೆ ಪ್ರಜೆಗಳ ಸಮ್ಮುಖದಲ್ಲಿ ಜನಸಾಮಾನ್ಯರ ಧ್ವನಿಯಂತೆ ಕೊಂಡಾಡುವ ಕವಿಯ ಭಾವದಲ್ಲಿ ದೊಡ್ಡವನಾಗಲು ಬಯಸುತ್ತಾನೆ. ಹಾಗೊಂದು ವೇಳೆ ಮೂಲ ಕವಿಯು ಕಾವ್ಯ ಅಥವಾ ಕೃತಿ ಬರೆಯವ ಅರ್ಧದಲ್ಲೇ ಅನಾರೋಗ್ಯ ಹಾಗೂ ಮರಣಕ್ಕೆ ತುತ್ತಾದ ಅನಿರೀಕ್ಷಿತ ಸಂದರ್ಭದಲ್ಲಿ ಇನ್ನೊಬ್ಬ ಕವಿಯೇ ಅದನ್ನು ಮುಂದುವರೆಸಿ ಬರೆದಿರುತ್ತಾನೆ. ರಾಜ ಬರೆದಿರುವುದಿಲ್ಲ. ಇಲ್ಲಿ ರಾಜನಾದ ಅಮೋಘವರ್ಷನೇ ತನ್ನ ಕವಿತಾ ಗುಣದಿಂದ ಬರೆಯಬಾರದೂ ಎಂದಲ್ಲ. ಆದರವನು ಕವಿಯಾಗಿಯೇ ತನ್ನನ್ನು ತಾನು ಕಂಡುಕೊಂಡಿರುತ್ತಾನೆ; ರಾಜನಾಗಿಯಲ್ಲ. ಈ ದೃಷ್ಟಿಯಿಂದಲೂ ಕವಿರಾಜಮಾರ್ಗದ ಮೂಲ ರಚನೆಯ ಸ್ಥಾನಮಾನವು ಜನಸಾಮಾನ್ಯರ ಸ್ಥಾನದಲ್ಲಿರುವ ಶ್ರೀವಿಜಯನಿಗೇ ಸಲ್ಲಬೇಕು. ಆದರೆ ಅದು ಸಂದಿದೆಯೇ ಇದು ಪ್ರಶ್ನೆಯಷ್ಟೇಯಲ್ಲ ವಿಚಾರಪ್ರಜ್ಞೆ. ಇದು ‘ಲಿಪಿಕಾರ ಕುಮಾರವ್ಯಾಸ’ ಎಂದು ತನ್ನನ್ನು ತಾನು ಬರಹಗಾರನಾಗಿಯೇ ಆತ್ಮವಿಶ್ವಾಸದಿಂದ ಗುರುತಿಸಿಕೊಳ್ಳುವ ಮುಂದಿನ ನಡುಗನ್ನಡದ ಕವಿ ಗದುಗಿನ ನಾರಾಯಣಪ್ಪ(ಕುಮಾರ ವ್ಯಾಸ)ನನ್ನೂ ನಾವಿಲ್ಲಿ ತಾಳೆಯಾಗಿ ನೋಡಬಹುದು. ಎಂದರೆ ಗದುಗಿನ ವೀರ ನಾರಾಯಣನ ಸಂಕಲ್ಪದಂತೆ ತಾನು ಬರೆದಿರುವುದು ಎಂದುಕೊಳ್ಳುವ ವಿನೀತಭಾವ ಮಾತ್ರ ಇಲ್ಲಿ ನಮಗೆ ಕಾಣಿಸುತ್ತಿದೆ. ಇಲ್ಲೆಲ್ಲ ಮುಖ್ಯವಾಗಿ ನಾವು ಅರಿವಿಗೆ ಒಡ್ಡಿಕೊಳ್ಳಬೇಕಾದ ಅಂಶ ಎಂದರೆ ಕವಿಯು ರಾಜ, ಧರ್ಮ, ರಾಜಕಾರಣದ ಆಶ್ರಯದಲ್ಲಿದ್ದರೂ ತನ್ನ ಸ್ವಂತಿಕೆಯನ್ನು ಬಿಟ್ಟುಕೊಡದಿರುವುದು. ತನ್ನನ್ನು ತಾನು ಕವಿಯೆಂದೇ ಹೆಚ್ಚು ಗುರುತಿಸಿಕೊಳ್ಳಲು ಪ್ರಯತ್ನಪಟ್ಟಿರುವುದು. ಅಂದರೆ ಜನಸಾಮಾನ್ಯತೆಯ ಭಾವದಿ ತನ್ನನ್ನು ತಾನು ಕಂಡುಕೊಳ್ಳುವಲ್ಲಿ ಸ್ವತಂತ್ರವಾದ ವ್ಯಕ್ತಿತ್ವವನ್ನು ಹುಡುಕಾಟ ನಡೆಸಿರುವುದು ಇಲ್ಲಿ ಗುಪ್ತಗಾಮಿನಿಯೂ ಆಗಿದೆ.
ಹಾಗೇ ಪಂಪ, ರನ್ನ, ಪೊನ್ನ, ಜನ್ನ ತಾವು ತಮ್ಮ ಸ್ವಂತವಾದ ಪ್ರೀತಿ, ಪ್ರೇಮ, ಬುದ್ಧಿ, ವಿಚಾರಗಳನ್ನು ಅಭಿವ್ಯಕ್ತಿ ಮಾಡಲು ರಾಜ ಹಾಗೂ ಪುರಾಣ ಪಾತ್ರಗಳ ಮೂಲಕ ಪ್ರತಿನಿಧಿಸಿ ಹೇಳುವ ಸಂಕಷ್ಟದಲ್ಲಿ ನರಳಿದ್ದಕ್ಕೂ ನಮ್ಮ ಸಾಹಿತ್ಯ ಚರಿತ್ರೆ ಸಾಕ್ಷಿಯಾಗಿದೆ. ಉದಾಹರಣೆಗೆ ಪಂಪ ತನ್ನ ಪ್ರಿಯತಮೆಗೆ ಹೇಳಬೇಕಾದ ತನ್ನೆಲ್ಲ ಭಾವನೆಗಳನ್ನು ಈಗಿನ ಸಾಹಿತ್ಯ ಮಾರ್ಗದಲ್ಲಿ ಕವಿ ಸ್ವಂತಿಕೆಯನ್ನು ತೋರಿ ಅಭಿವ್ಯಕ್ತಿಸುವಂತೆ ನಿರೂಪಿಸಲು ಸಾಧ್ಯವಾಗಿಲ್ಲ. ಬದಲಿಗೆ ಅದನ್ನು ತನ್ನ ಆಶ್ರಯದಾತನಾದ ಅರಿಕೇಸರಿಗೆ ಅರ್ಜುನನ್ನು ಸಮೀಕರಿಸಿ ಏಕಕಾಲದಲ್ಲಿ ಅರ್ಜುನ ಹಾಗೂ ಅರಿಕೇಸರಿಯ ಹೃದಯಗರ್ಭವನ್ನು ಪರಕಾಯ (ಪರಜೀವವೂ ಹೌದು!) ಪ್ರವೇಶಮಾಡುವ ಅನಿವಾರ್ಯತೆಯಲ್ಲಿ ಬಳಲಿದವನಂತೆ ಕಂಡುಬರುತ್ತಾನೆ. ಅದರಂತೆ ತನ್ನೆಲ್ಲ ಭಾವನೆಗಳನ್ನೆಲ್ಲ ತನ್ನ ಪ್ರೇಯಸಿಗೆ ವ್ಯಕ್ತಪಡಿಸಬೇಕಾದುದನ್ನು ಅರ್ಜುನ/ಅರಿಕೇಸರಿಯ ಪ್ರೇಯಸಿಗೆ ಹೇಳಿ ತೃಪ್ತಿಪಟ್ಟುಕೊಂಡಿದ್ದಾನೆ. ಪ್ರಜಾಪ್ರಭುತ್ವದ ಜನಸಾಮಾನ್ಯ ಕವಿ ಸಿದ್ದಲಿಂಗಯ್ಯನವರಂತೆ ಸ್ವಚ್ಛಂದವಾಗಿ ಪಂಪನಿಗೆ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಎನ್ನಲು ಸಾಧ್ಯನೇ ಆಗಿಲ್ಲ. ಇಲ್ಲೆಲ್ಲ ಕವಿಯು ತನ್ನೊಳಗಿನ ಜನಸಾಮಾನ್ಯನನ್ನು ಮುಕ್ತವಾಗಿ ತರೆದಿಡಲು ಅವಕಾಶವೇ ದೊರಕಿಲ್ಲ. ಹೀಗೆ ಕಟ್ಟುಪಾಡುಗಳ ಕಟ್ಟಿನೊಳಗೆ, ಭಾವಬಂಧನಗಳ ಬೇಲಿಯೊಳಗೆ ಆ ಕಾಲಘಟ್ಟಗಳ ಕವಿ ಬಂಧಿಯಾಗಿದ್ದಾನೆ. ಹಾಗೇ ತನ್ನನ್ನು ತಾನೇ ಕಳೆದುಕೊಂಡು ನೊಂದುಕೊಂಡಿರಲೂಬಹುದು. ರಾಜಾಶ್ರಯ, ಧರ್ಮಾಶ್ರಯ ಎಂಬ ಹೆಸರಿನಿಂದ ಮಾತ್ರ ಮೆರೆದು ಸನ್ಮಾನಿತನಾದರೂ ಒಳಗೊಳಗೆ ಹಾಗೇ ನೋವನ್ನೂ ಉಂಡಿದ್ದಾನೆ. ಅಂದರೆ ಒಂದರ್ಥದಲ್ಲಿ ‘ಮುಖದಲ್ಲಿ ನಗುವಿದೆ, ಮನದಲ್ಲಿ ನೋವಿದೆ!’ ಎಂಬ ಮಾತು ಇಂತಹ ಸಾಹಿತ್ಯಮಾರ್ಗದ ಕವಿಗಳಿಗೆ ಸರಿಯಾಗಿ ಒಪ್ಪುತ್ತದೆ.
ಉಳ್ಳವರು ಶಿವಾಲಯವ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬವು ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ
ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ
ಇಲ್ಲಿ ಬಸವಣ್ಣನವರ ಒಲುಮೆ ಅದೇಷ್ಟು ಜೀವನಮುಖಿಯಾಗಿದೆ ಎಂದರೆ ಉಳ್ಳವ ರಾಜನಾದರೆ, ನಾನು ಎಂಬ ತನ್ನತನದ ಹುಡುಕಾಟದಲ್ಲಿ ಜನಸಾಮಾನ್ಯನನ್ನು ಪ್ರತಿನಿಧಿಸುತ್ತಿರುವುದು ತಿಳಿಯುತ್ತದೆ. ಅದರಂತೆ ಜೀವ ಮತ್ತು ಜೀವನ ಚಲಿಸುವ ಚೇತನವಾಗಿ ಅದು ನಮ್ಮೊಳಗೆ ನಾವು ಇರುವ ತನಕವೂ ಚಲನಶೀಲತೆಯಿಂದ ಸದಾ ಜೀವಂತವಾಗಿರುತ್ತದೆ. ಆದರೆ ಕಟ್ಟಡ ಹಾಗಲ್ಲ, ಅದು ಅಳಿದ ಮೇಲೆ ಏನೂ ನೆನಪುಗಳು ಉಳಿಯದೇ ಹೋಗಬಹುದು. ಆದರೆ ನಮ್ಮ ಪ್ರೀತಿಯ ಬದುಕು ಎಲ್ಲಾ ಕಾಲಕ್ಕೂ ಮಾದರಿಯುತವಾಗಿದ್ದರೆ ಖಂಡಿತವಾಗಿ ನೆನಪಿನ ಅಕ್ಷರದಲ್ಲಿ ಹಸಿರಾಗಿರುತ್ತದೆಂದು ಬಸವಣ್ಣ ನಂಬಿದವರಾಗಿದ್ದರು. ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಕೂಡ- “ನಾನು ಪ್ರತಿಮೆಗಳಲ್ಲಿ ಅಲ್ಲ, ಪುಸ್ತಕಗಳಲ್ಲಿ ಸಿಗುತ್ತೇನೆ. ನನ್ನನ್ನು ಪೂಜೆಮಾಡುವುದರಿಂದ ಅಲ್ಲ, ಓದುವುದರಿಂದ ಸಿಗುತ್ತೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಕೂಡ ಬಸವಣ್ಣನವರ ಈ ನಿಲುವಿಗೆ ಸಂವಾದಿಯಾಗಿದೆ. ಪ್ರಬುಧ್ಧನಾದ ಮಹಾಜ್ಞಾನಿ ಬುದ್ಧನೂ ಒಂದು ಕಾಲದಲ್ಲಿ ಅರಮನೆಯನ್ನು ತೊರೆದು ಜನಸಾಮಾನ್ಯನಾಗಿ ರೋಗ, ಮುಪ್ಪು, ಸಾವಿನ ಮರ್ಮವನ್ನು ನೆಲದ ದನಿಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಊರೂರು ಅಲೆಯುವುದು ಮತ್ತು ಬೋಧಿವೃಕ್ಷದ ಕೆಳಗೆ ಧ್ಯಾನಸ್ಥನಾಗುವುದು ಇದೇ ಅರಿವಿನ ಮಹಾ ಬೆಳಕೇ ಆಗಿದೆ. ಮಹಾಮನೆ ಅನುಭವ ಮಂಟಪದಲ್ಲಿ ಬಸವಾದಿ ಮಹಾ ಶರಣರು, ಜನಸಾಮಾನ್ಯ ವಚನಕಾರರು ಬಸವಣ್ಣನವರ ಸಮ್ಮುಖದಲ್ಲಿ ಜೀವನದ ಮೌಲ್ಯಗಳನ್ನು ತಮ್ಮತಮ್ಮ ಅನುಭವದ ಹಿನ್ನೆಲೆಯಲ್ಲಿ ತಮ್ಮ ಆಲೋಚನೆಯ ಲಹರಿಯಿಂದ ಕಟ್ಟಿರುವುದನ್ನು ನಾವೀಗ ವಚನ ಸಾಹಿತ್ಯದಲ್ಲಿ ಗುರುತಿಸಬಹುದಾಗಿದೆ. ಹಾಗಾಗಿಯೇ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ನಮ್ಮೆಲ್ಲ ವೈಚಾರಿಕ ಚಿಂತನೆಯೊಳಗೆ ಒಂದು ಸಾಮ್ಯತೆ ಇರುವುದಾಗಿದೆ.
ನಾನು ಬಸವಣ್ಣನವರ ಕುರಿತಾದ ಈ ವಿಶೇಷ ವಿಚಾರ ಮಂಥನದಲ್ಲಿ ‘ಬಸವಣ್ಣನವರ ಜನಸಾಮಾನ್ಯತೆ’ ಎಂಬ ಒಂದು ಸಿಂಪಲ್ ಪರಿಕಲ್ಪನೆಯೊಳಗೆ ಅವರನ್ನು ನೋಡುತ್ತ ಹೊರಟಾಗ ಅವರೊಬ್ಬ ನಮ್ಮೊಳಗಿನ ಜನಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಮಾಡಿಬಿಡುವ ಗುಣದಿಂದಲೂ ಹೃದಯಕ್ಕೆ ಇನ್ನಷ್ಟು ಹತ್ತಿರವಾದರು. ಈ ನಿಟ್ಟಿನಿಂದ ರಂ.ಶ್ರೀ. ಮುಗುಳಿ ಅವರು ತಮ್ಮ ಕನ್ನಡ ಸಾಹಿತ್ಯ ಚರಿತ್ರೆ ಕೃತಿಯಲ್ಲಿ ಅವರ ಸಮಕಾಲೀನ ಚಿಂತಕ, ವಿದ್ವಾಂಸರಾದ ಕೋ.ಚನ್ನಬಸಪ್ಪನವರ ಅಭಿಪ್ರಾಯವನ್ನು ಉಲ್ಲೇಖಿಸಿ “ಅವರ ವಚನಗಳು ಬರೀ ನಟನೆಯಲ್ಲ, ಅವು ಅಂತರಂಗ ಸ್ಫುರಿತ ನೈಸರ್ಗಿಕ ಭಾವಗಳು. ಬಸವಣ್ಣನವರ ಆತ್ಮವೃತ್ತವು ಪ್ರಬಲವಾದೊಂದು ಮನೋಯುದ್ಧದ ಚರಿತ್ರೆಯಾಗಿರುತ್ತದೆ” (ಕನ್ನಡ ಸಾಹಿತ್ಯ ಚರಿತ್ರೆ, ಸಂಸ್ಕರಣ:೨೦೦೭) ಎಂದಿರುವುದು ಗಮನಾರ್ಹವಾಗಿದೆ.
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸರಾಗವ ಹಾಡಯ್ಯಾ
ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ!
ಎಂಬ ಭಕ್ತಿಪ್ರಧಾನ ವಚನದಲ್ಲೂ ಸಾಮಾನ್ಯ ವಿಷಯವಸ್ತುಗಳೆಂದು ಬಹುತೇಕರು ಪರಿಭಾವನೆಯಲ್ಲಿ ತಂದುಕೊಳ್ಳುವ ಸೋರೆ, ತಂತಿ, ಕಡ್ಡಿಯು ತನ್ನ ದೇಹದ ಭಾವದಲ್ಲಿ ಅವತರಿಸುವಂತೆ ಅಂತರಾತ್ಮದ ಪ್ರತೀಕ ಕೂಡಲಸಂಗಮದೇವನನ್ನು ಕೋರಿದ್ದಾರೆ. ಮುಂದುವರೆದು “ನಾಳೆ ಬಪ್ಪುದು ನಮಗಿಂದೆ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ, ಇದಕಾರಂಜುವರು?” ಎಂದು ನಿತ್ಯ ಜೀವನದ ಚೇತನಶೀಲತೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಜನಸಾಮಾನ್ಯನ ನೆಲೆಯಲ್ಲಿ ಅದನ್ನು ಸಹಜವಾಗಿಯೇ ಸ್ವೀಕರಿಸುವ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ. ಬಸವಣ್ಣ ಹೀಗೆ ತನ್ನ ಸರಳ, ಸಂಯಮಶೀಲವಾದ ಗುಣದಿಂದಲೇ ಬಸವಯುಗ ಎಂಬ ಕಾಲಘಟ್ಟದ ಪ್ರತಿನಿಧಿ ಎನಿಸಿ ಯುಗ ಪ್ರವರ್ತಕನಾಗಿರುವುದು.
ಬಸವ ಬಾರಯ್ಯ!
ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ?
ಮತ್ತಾರೂ ಇಲ್ಲಯ್ಯ ಮತ್ತಾರೂ ಇಲ್ಲಯ್ಯ!
ನಾನೊಬ್ಬನೇ ಭಕ್ತನು
ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ
ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ
ಮರ್ತ್ಯಲೋಕದಲ್ಲಿ ಭಕ್ತಿಯ ಬೀಜವನು ಬಿತ್ತುವುದಕ್ಕಾಗಿಯೇ ಬಸವಣ್ಣನವರು ಶಿವನ ಆಜ್ಞೆಯನ್ನು ಶಿರಸಾ ವಹಿಸಿ ಅವತರಿಸಿದವರು. ಅವರ ನೇತೃತ್ವದಲ್ಲಿ ಕರ್ನಾಟಕದೆಲ್ಲಡೆಯಲ್ಲೂ ಭಕ್ತಿಯ ಬೆಳೆ ಹುಲುಸಾಗಿ ಬಂದಿತು. ಬಂದ ಕೆಲಸವಾಯಿತು. ಭೂಮಿಯ ಮೇಲೆ ಭಕ್ತರ ಬಳಗ ಬೆಳೆಯಿತು. ಇನ್ನು ಕೈಲಾಸಕ್ಕೆ ಬಾರೆಂದು ಶಿವನು ಬಸವಣ್ಣನವರನ್ನು ಕೈಬೀಸಿ ಕರೆದಾಗ, ಅವರು ಶರಣರ ಸಂಗವನ್ನಗಲಿ ಬರಲಾರದೆ ಭೂಲೋಕದಲ್ಲಿ ಭಕ್ತರಾರೂ ಇಲ್ಲ. ಇರುವ ಭಕ್ತನೆಂದರೆ ನಾನೊಬ್ಬನೇ ಬರಲಾರೆನೆನ್ನುವರು. ಬಸವಣ್ಣನವರ ಈ ಆತ್ಮಪ್ರಶಂಸಾಭಾವದ ಮಾತನ್ನು ಕೇಳಿ ಎನಗಿಂತ ಕಿರಿಯರಿಲ್ಲವೆಂದವರು ಇವರೇ ಅಲ್ಲವೇ ಎಂದು ಚಕಿತರಾಗುತ್ತೇವೆ”(ಬಸವ ವಚನಾಮೃತ ಭಾಗ-೧/ಪುಟ:೬೪) ಎಂದಿದ್ದಾರೆ.
ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲು ಬೇಡಿದೆ
ಚೆನ್ನಯ್ಯನ ಮನೆಯಲು ಬೇಡಿದೆ
ದಾಸಯ್ಯನ ಮನೆಯಲು ಬೇಡಿದೆ
ಎಲ್ಲಾ ಪುರಾತನರು ನೆರೆದು ಭಕ್ತಿಭಿಕ್ಷವನ್ನಿಕ್ಕಿದರೆ
ಎನ್ನ ಪಾತ್ರೆ ತುಂಬಿತ್ತು ಕೂಡಲ ಸಂಗಮದೇವ.
ಬಸವಣ್ಣನವರು ತಾನು ಒಂದು ರಾಜಪ್ರಭುತ್ವ ಸಾಮಾಜ್ರ್ಯದ ಮಂತ್ರಿಯಾಗಿ ಹಾಗೂ ಭಕ್ತಿಭಂಡಾರಿ ಎಂದು ಜನಸಾಮಾನ್ಯರಿಂದಲೇ ಹೆಸರುವಾಸಿಯಾಗಿದ್ದರೂ ಮತ್ತದೇ ರಾಜ ಗಾಂಭೀರ್ಯದಿಂದ ಬೀಗಲಿಲ್ಲ. ಸಂಪತ್ತಿನ ಅಹಂನಿಂದ ಮೈಮರೆಯಲಿಲ್ಲ. ಬದಲಿಗೆ ಜನಸಾಮಾನ್ಯರಾದ ಕಕ್ಕಯ್ಯ, ಚೆನ್ನಯ್ಯ, ದಾಸಯ್ಯನ ಮನೆಯಲ್ಲಿ ಭಕ್ತಿ ಎಂಬ ವಿವೇಕ ಮತ್ತು ವಿನಯದ ಭಿಕ್ಷೆಯನ್ನು ಬೇಡಿ, ಉಂಡು ತನ್ನ ಜ್ಞಾನಪಾತ್ರೆಯನ್ನು ಸದಾ ಅಕ್ಷಯವಾಗಿರುವಂತೆ ಕಾಪಿಟ್ಟುಕೊಂಡರು. ನಿಜಕ್ಕೂ ಅವರ ಸಂಯಮ ಅನನ್ಯ. ಇಂತಹ ಬಸವಣ್ಣನವರ ಜನಸಾಮಾನ್ಯತೆಯನ್ನು ತಾತ್ವಿಕವಾಗಿ ಕಟ್ಟಿಕೊಡುವ ಒಂದು ಪುಟ್ಟ ಪ್ರಯತ್ನವಿದು. ಆದ್ದರಿಂದ ಸರ್ವಜನಾಂಗದ ಹೃದಯಬಂಧು ಬಸವಣ್ಣನವರಿಗೆ ಅವರ ಆತ್ಮೀಯ ಒಬ್ಬ ಜನಸಾಮಾನ್ಯನಾಗಿ ನನ್ನ ಪ್ರೀತಿಯ ವಿಶೇಷ ನಮಸ್ಕಾರಗಳು.