Thursday, 10 October 2024


 

ತೇಜಸ್ವಿ: ಪ್ರೀತಿ, ಜಾತಿ ಇತ್ಯಾದಿ

-   ಡಾ.ಸಂಪತ್ ಬೆಟ್ಟಗೆರೆ

ಕನ್ನಡ ಉಪನ್ಯಾಸಕರು, ಲೇಖಕರು,  

ಮೂಡಿಗೆರೆ೫೭೭೧೧೩ಮೊ: ೯೩೫೩೦೫೭೦೬೭


 


ಪ್ರಸ್ತಾವನೆ:

ಇದೊಂದು ವಿಶೇಷ ವಿಶ್ಲೇಷಣಾತ್ಮಕ ಲೇಖನ. ತೇಜಸ್ವಿಯವರ ಸಾಹಿತ್ಯ ಕುರಿತು ಒಂದು ನಿಟ್ಟಿನಿಂದ ತಮಾಷೆಯಾಗಿ ಅದರಲ್ಲಿ ಬರುವ ಬೈಗುಳಗಳನ್ನು ಸೀಮಿತ ದೃಷ್ಟಿಕೋನದಿಂದ ನೋಡುವ ಒಂದು ನೋಟ. ಅದರಂತೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೇಜಸ್ವಿ ಎಂಬ ಜಾತ್ಯಾತೀತವಾದಿ ನಿಲುವಿನ ವ್ಯಕ್ತಿತ್ವವನ್ನೇ ಜಾತಿವಾದಿ ವ್ಯಕ್ತಿಯಾಗಿ ಒಂದೇ ದೃಷ್ಟಿಕೋನದಿಂದ ಏಕಮುಖಿ ಗ್ರಹಿಕೆಯಲ್ಲಿ ಕಂಡುಕೊಂಡಿರುವುದಕ್ಕೆ ಒಂದು ಪ್ರತಿಕ್ರಿಯಾತ್ಮಕ ವಿವೇಚನೆಯಾಗಿ ಲೇಖನ ನಿರೂಪಿತ

     ಉದಾಹರಣೆಗೆ ತೇಜಸ್ವಿಯವರ  ಪರಿಸರದ ಕತೆ ಪುಸ್ತಕದಲ್ಲಿನ ಪಾತ್ರ ಕರಿಯಪ್ಪ ಮೇಲುಜಾತಿಯ ಒಕ್ಕಲಿಗರ ಗೌಡ ಸಮುದಾಯದವನಾದುದರಿಂದ ಕೆಳವರ್ಗವೊಂದರ  ಸಮುದಾಯದ ಪಾತ್ರವಾದ ಎಂಗ್ಟನನ್ನು ಬೈಗುಳದಲ್ಲಿ ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ; ಇದರಲ್ಲಿ ಹುಟ್ಟಿನ ಜಾತಿಯಿಂದ ಕರಿಯಪ್ಪನನ್ನೇ ಪ್ರತಿನಿಧಿಸುವ ತೇಜಸ್ವಿಯವರ ಒಕ್ಕಲಿಗ ಗೌಡ ಜಾತಿಯ ಅಹಂಮಿಕೆಯೂ ಈ ಹಿನ್ನೆಲೆಯಲ್ಲಿ ಕೆಲಸಮಾಡಿದೆ ಎಂಬ ಭಾವದಲ್ಲಿ ಸಿ.ಜಿ.ಲಕ್ಷ್ಮೀಪತಿ ಎಂಬುವರು ಇತ್ತೀಚೆಗೆ ಪತ್ರಿಕೆವೊಂದರಲ್ಲಿ ಲೇಖನ ಬರೆದು ಜಾತ್ಯತೀತ ಧೋರಣೆಯ ತೇಜಸ್ವಿಯವರನ್ನು ಇದೇ ಪ್ರಥಮಬಾರಿಗೆ ಜಾತಿವಾದಿ ಎಂಬಂತೆ ಬರೆದಿದ್ದಾರೆ. ಹೀಗೆ ಮಾಸ್ತಿ ಮತ್ತು ಬೈರ ಎಂಬ ಪಾತ್ರಗಳನ್ನೂ  ಜಾತಿ ಹಿನ್ನೆಲೆಯೊಳಗೆ ತೇಜಸ್ವಿ ಚಿತ್ರಿಸಿದ್ದಾರೆ ಎಂದು ಚಿಂತನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾನು ಪ್ರೀತಿವಾದಿ ತೇಜಸ್ವಿ ಯಾವತ್ತೂ ಜಾತಿವಾದಿ ಆಗಿರಲಿಲ್ಲ!” ಎಂದು ಇಲ್ಲಿ ಕೆಲವು ನಿದರ್ಶನಗಳ ಮೂಲಕ ವಿವರಿಸಿದ್ದೇನೆ. ಪ್ರೀತಿಯ ಪ್ರಜ್ಞಾವಂತ ಓದುಗರು ಇದನ್ನು ಮುಕ್ತ ಮನಸ್ಸಿನಿಂದ ಓದಿರಿ. ಅದರಂತೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.


ವಿಷಯ ವಿವೇಚನೆ:

 ೨೦೨೪ ಜುಲೈ ೨೮ ಮತ್ತು ೨೯ ರಂದು ಬೆಂಗಳೂರಿನಲ್ಲಿ ತೇಜಸ್ವಿ ವಿಸ್ಮಯ ಕಾರ್ಯಕ್ರಮ. ಇದರಲ್ಲಿ ತೇಜಸ್ವಿಯವರ ಸಮಗ್ರ ಸಾಹಿತ್ಯ ಆಧಾರಿತ ಸಂಪುಟಗಳ ಲೋಕಾರ್ಪಣೆ ಹಾಗೂ ಎರಡು ದಿನಗಳ ವಿಶೇಷ ಉಪನ್ಯಾಸ. ಇಲ್ಲಿ ಅನೇಕ ಮಂದಿಯ ಮಾತು-ಕತೆ. ಇವರಲ್ಲಿ ಕೆಲವರು ತೇಜಸ್ವಿಯವರೊಂದಿಗೆ ಅವರ ಭೌತಿಕ ಜೀವನದ ಸಂದರ್ಭದಲ್ಲಿ ಪರಿಚಯ ಇಟ್ಟುಕೊಂಡವರೆಂಬುವರು. ಇನ್ನೂ ಕೆಲವರು ಅವರ ಸಾಹಿತ್ಯವನ್ನು ಓದಿಕೊಂಡವರೆನ್ನುವಂತರು. ಕಾರ್ಯಕ್ರಮವನ್ನು ಬುಕ್ಬ್ರಹ್ಮ ಎಂಬ ಯುಟ್ಯೂಬ್ ಚಾನೆಲ್ ಲೈವ್ನಲ್ಲಿ ವೀಕ್ಷಣೆ ಮಾಡಿದ ನನಗೆ ಅನ್ನಿಸಿದ್ದು ಏನೆಂದರೆಇಲ್ಲಿ ಮಾತನಾಡಿದ ಬಹುತೇಕ ಮಂದಿಗೆ ತೇಜಸ್ವಿಯವರ ಸಾಹಿತ್ಯದ ಮೂಲ ಆಶಯವೇ ಅರ್ಥವಾಗಿಲ್ಲ. ಆದ್ದರಿಂದ ಅದರ ಬೇರು ಕಾಂಡ ಚಿಗುರಿನ ಅರಿವಿಲ್ಲದೆ ಏನೇನೋ ತಮಗೆ ಅನ್ನಿಸಿದ್ದನ್ನು ಹೇಳುತ್ತಿದ್ದಾರೆ. ಇನ್ನೂ ಕೆಲವರು ತಮಗಿರುವ ಪರಿಚಯ ಹಾಗೂ ಬಂಧುತ್ವದ ಸಂಬಂಧವನ್ನೇ ವೈಯಕ್ತಿಕ ಹಿನ್ನೆಲೆಯಲ್ಲಿ ಒಂದಷ್ಟು ಉತ್ಪ್ರೇಕ್ಷೆಯಾಗಿ ಸಭಿಕರೆದುರು ಹೇಳಹೋಗಿ ಅವರಿಂದ ಚಪ್ಪಾಳೆ ಗಿಟ್ಟಿಸುವ ಭರದಲ್ಲಿ ತೇಜಸ್ವಿ ಪ್ರೀತಿಗೆ ಆಭಾರಿಗಳು ಎಂಬಂತೆ ತೋರಿಸಿಕೊಂಡದ್ದು. ಆದರೆ ನಾವೆಲ್ಲ ಹಿಂದೆ ಶಾಲಾ ಕಾಲೇಜು ವಿದ್ಯಾಗುರುಗಳಿಂದ ಕೇಳಿ ಹಾಗೂ ಒಂದಿಷ್ಟು ದೂರದಿಂದಲೇ ನೋಡಿ ಪರಿಕಲ್ಪನೆಗೆ ತಂದುಕೊಂಡಿದ್ದ ತೇಜಸ್ವಿಯವರ ಗಾಂಭೀರ್ಯ ಸ್ವಭಾವದ ವ್ಯಕ್ತಿಚಿತ್ತ ಚಿತ್ರವನ್ನು ಇಷ್ಟೊಂದು ಸರಳೀಕೃತವಾಗಿ ಹಾಸ್ಯಾಸ್ಪದವಾಗಿ ಅಭಿವ್ಯಕ್ತಿ ಮಾಡುತ್ತಿರುವ ಇವರ ಉದ್ದೇಶವಾದರೂ ಏನು?” ಎಂದು. ಆದ್ದರಿಂದ ಕಾರ್ಯಕ್ರಮ ಲೈವ್ ನಲ್ಲಿ ಪ್ರಸಾರವಾಗುತ್ತಿದ್ದ ಉಲ್ಲೇಖಿತ ಯುಟ್ಯೂಬ್ ಚಾನೆಲ್ ಕಾಮೆಂಟ್ ಬಾಕ್ಸಿನಲ್ಲಿ ನಾನು ಪ್ರತಿಕ್ರಿಯೆಯಾಗಿತೇಜಸ್ವಿ ಭೌತಿಕವಾಗಿ ಬದುಕಿದ್ದು ತಾನೇ ಸ್ವತಃ ಉತ್ತರಿಸಲು, ಪ್ರಶ್ನಿಸಲು ಸಾಧ್ಯತೆ ಇಲ್ಲದ ಹೊತ್ತಿನಲ್ಲಿ ಅವರನ್ನು ಹಾಗೂ ಅವರು ಬರೆದ ಸಾಹಿತ್ಯವನ್ನು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಿ ಮಾತನಾಡಬಹುದು! ಬರೆಯಬಹುದು! ಎಂಬ ನಿಲುವಿಗೆ ಬಹುತೇಕರು ಬಂದಂತಿದೆ. ನಿಟ್ಟಿನಿಂದ ತೇಜಸ್ವಿ ಒತ್ತಟ್ಟಿಗಿರಲಿ; ಅವರನ್ನು ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸುವವರು ನೈತಿಕವಾಗಿ ತಾವೇನು? ತಾವು ಸಮಾಜಮುಖಿಯಾಗಿ ಹೇಗೆ ನಡೆನುಡಿಯಲ್ಲಿ ಒಂದೇ ಎಂಬಂತೆ ಇದ್ದೇವೆ? ಇರುತ್ತೇವೆ? ಎಂಬುವುದೂ ಮುಖ್ಯವಾಗುತ್ತದೆ. ಇದಕ್ಕೆ ನಾನೂ ಕೂಡ ಹೊರತಾಗಿಲ್ಲ ಎಂಬ ವಿವೇಕದೊಂದಿಗೆ ಅಭಿಪ್ರಾಯಎಂದು ಬರೆದೆ. ತದನಂತರ ನಾಲ್ಕಾರು ದಿನಗಳ ತರುವಾಯ ಇಲ್ಲಿನ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಕಾಲೀನ ಸಮಾಜಮುಖಿ ಚಿಂತನೆಯ ಚಿಂತಕರೆನಿಸಿರುವರೊಬ್ಬರು ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. (ತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿ - ಡಾ.ಸಿ.ಜಿ.ಲಕ್ಷ್ಮೀಪತಿ, ಜನಪರ ಮಾತುಕತೆ, ಆಗಸ್ಟ್ ೨೦೨೪) ಅದರಲ್ಲವರು ತೇಜಸ್ವಿ ಸಂಬಂಧಿ ಎನಿಸಿಕೊಂಡವರೊಬ್ಬರು (ಸೇನಾನಿ) ಕಾರ್ಯಕ್ರಮದಲ್ಲಿ ಭಾಷಣಮಾಡುವ ಸಂದರ್ಭದಲ್ಲಿ ತೇಜಸ್ವಿಯವರ  ‘ಪರಿಸರದ ಕಥೆಕೃತಿಯಲ್ಲಿ ಬರುವ ಎರಡು ಪ್ರಸಂಗಗಳನ್ನು ವಿವರಿಸಿದ್ದಾಗಿ ಉಲ್ಲೇಖಿಸುತ್ತ ಅಲ್ಲಿನ ತಳಸಮುದಾಯದ ಪಾತ್ರಗಳಾದ ಮಾಸ್ತಿ ಮತ್ತು ಬೈರನನ್ನು ಕಥೆಯ ನಿರೂಪಕನು ಮನುಷ್ಯರೆಂದು ಗುರುತು ಹಿಡಿಯಲು ತುಂಬಾ ಸಮಯ ತೆಗೆದುಕೊಂಡ ನಿರೂಪಣೆಯ ವೈಖರಿ ಹಾಗೂಎಂಗ್ಟನ ಪುಂಗಿ ಕಥೆಯಲ್ಲಿನ ಕರಿಯಪ್ಪನುಥೂ.....’ ಎಂಬ ಮುಂದುವರಿದ ಬೈಗುಳದೊಂದಿಗೆ ಮತ್ತದೇ ತಳಸಮುದಾಯವೊಂದರ ಎಂಗ್ಟನನ್ನು ಕುರಿತು ಮಾತನಾಡುವ ಸಂಭಾಷಣೆಯನ್ನು ತಮಾಷೆಯಾಗಿ ಬಳಸಿಕೊಂಡು ಸಭಿಕರೆದುರು ಭಾಷಣಕಾರರು ಭಾಷಣಮಾಡುತ್ತಿದ್ದಾಗ ಸ್ವತಃ ತಾವು ಸಭಿಕರೊಂದಿಗೆ ಕುಳಿತು ಕೇಳುತ್ತಿದ್ದವರು ಮನನೊಂದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಬಹುತೇಕರು ಲೇಖಕ ಸಂಬಂಧಿಯ (ಸೇನಾನಿ) ಮಾತನ್ನು ಕೇಳುತ್ತಿದ್ದವರು ಆಗಲ್ಲಿ ನಗುತ್ತಿರುತ್ತಾರಂತೆ. ಆದರೆ ನೊಂದವರ ವರ್ಗದಿಂದ ಬಂದ ಸಭಿಕರ ಸಾಲಿನ ಲೇಖಕರಿಗೆ (ಲಕ್ಷ್ಮೀಪತಿಗೆ) ಅದು ತಮಾಷೆ ಎಂದೆನಿಸದೆ ಒಂದಾನೊಂದು ಕಾಲಘಟ್ಟದಲ್ಲಿ ತನ್ನದೇ ಸಮುದಾಯವು ಹೇಗಿತ್ತು? ಅವರನ್ನು ಉನ್ನತವರ್ಗವು ಹೇಗೆ ನಡೆಸಿಕೊಳ್ಳುತ್ತಿತ್ತು ಎಂಬುವುದನ್ನು ಪರಿಕಲ್ಪನೆಗೆ ತಂದುಕೊಂಡಾಗ ಒಂಥರ ಒಡಲ ಸಂಕಟವಾಗುವುದು ಸಹಜವಾಗಿಯೇ ಅವರ ಲೇಖನದಲ್ಲಿ (ತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿ) ಅಭಿವ್ಯಕ್ತವಾಗಿದೆ. ನಿಜ, ನಾನೂ ಕೂಡ ಅಲ್ಲಿದ್ದರೆ ನಗುವ ಬದಲು ಕಂಗಳು ತುಂಬಿದ ಕಂಬನಿಗಳಿಂದ ಭಾಷಣಕಾರರನ್ನು (ಸೇನಾನಿ) ಕ್ವಶ್ಚನ್ ಮಾರ್ಕ್ನ ನೋಟದಲ್ಲೆ ನೋಡಿರುತ್ತಿದ್ದೆ.

   ಇದನ್ನು ಪ್ರಾಯಶಃ ಭಾಷಣಕಾರರ ಅರಿವಿನ ಸಮಸ್ಯೆ ಎಂದೇ ನೋಡಬೇಕಿದೆ. ಇಲ್ಲದಿದ್ದರೆ ಅವರು ಒಂದು ಕಾಲ ಸಂದರ್ಭದಲ್ಲಿ ತೇಜಸ್ವಿಯಂತಹ ಲೇಖಕರು ಬದುಕಿದ್ದ ಪ್ರಾದೇಶಿಕ ಪರಿಸರದಲ್ಲಿ ಜನರ ನಡುವಿನ ಬೈಗುಳಗಳು ಹೇಗಿರುತ್ತಿದ್ದವು ಎಂಬುದನ್ನು ಭಾಷೆ ಮತ್ತು ಭಾವದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಬೇಕಿತ್ತು. ಅದನ್ನು ಕೇವಲ ತಮಾಷೆಯಾಗಿ ತೇಜಸ್ವಿಯವರು ಬಳಸಿದ್ದಾರೆಂದುಕೊಂಡಿರುವುದೇ  ಅವರ ಸೀಮಿತ ದೃಷ್ಟಿಕೋನಕ್ಕೆ ಸಾಕ್ಷಿ ಎಂಬಂತಿದೆಯಲ್ಲವೇ? ನನ್ನಂತಹ ಹಸಿವು ಕುಟುಂಬದ ಬಡವರ್ಗದವನಿಗೆ ತೇಜಸ್ವಿಯವರ ತಬರನ ಕಥೆಯನ್ನು ಓದುವಾಗ ಅಥವಾ ಶಿಕ್ಷಕರಿಂದ ಪಠ್ಯಪುಸ್ತಕವಾಗಿ ಆಲಿಸಿಕೊಳ್ಳುವಾಗ ಆತನು ತನಗೆ ಹೆಂಡತಿಯ ಗಾಯದ ಕಾಲನ್ನು ಆಪರೇಷನ್ ಮಾಡಿಸಲಾಗದೆ ಮಾಂಸದಂಗಡಿಯವನ ಬಳಿಗೆ ಹೋಗಿ ಕಾಲು ಕತ್ತರಿಸಿಕೊಡು ಎಂದು ಕೇಳುವ ದೈನ್ಯಸ್ಥಿತಿಗೆ ದುಃಖ ಉಮ್ಮಳಿಸುತ್ತಿತ್ತು. ಆದರೆ ನನ್ನ ಕೆಲವು ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಸಹಪಾಠಿಗಳು ಪ್ರಸಂಗ ಬಂದಕೂಡಲೇ ಜೋರಾಗಿ ನಕ್ಕುಬಿಡುತ್ತಿದ್ದರು. ಆದರೆ ಇಲ್ಲಿ ಕಥೆಗಾರ ತೇಜಸ್ವಿ ಅವರು ಹೇಳಹೊರಟಿರುವುದು ನೋವಿನ ಚಿತ್ರ. ಕೆಲವರಿಗದು ವಿಚಿತ್ರ ಹಾಸ್ಯ. ಇದೆಂತಾ ಅಪಸವ್ಯ? ಆದ್ದರಿಂದ ಕಥೆಗಾರನ ಮೂಲ ಆಶಯವನ್ನು ಅರ್ಥಮಾಡಿಕೊಳ್ಳದೆ ಹೋದರೆ ಆತನ ಬರಹದ ಸಹೃದಯತೆಯನ್ನೇ ಕೊಂದಂತಾಗುವುದು ದಿಟ. ಆದ್ದರಿಂದ ಪ್ರಮುಖವಾಗಿ ಅಧ್ಯಾಪಕರು, ಭಾಷಣಕಾರರು, ಸಾಹಿತ್ಯ ವಿಮರ್ಶಕರು, ಚಿಂತಕರು ಕಥೆಗಾರನ ಮನದಿಂಗಿತವನ್ನು ಸರಿಯಾಗಿ ಅರ್ಥಮಾಡಿಕೊಂಡು ವಿಶ್ಲೇಷಣೆಗೊಳಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಅವರ ಮೂಲಕ ಇಂತೊಬ್ಬ ಕಥೆಗಾರನನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಒಬ್ಬ ಸಮಾಜಮುಖಿ ಬರಹಗಾರನನ್ನು ತಮ್ಮೊಳಗೇ ಕೊಂದುಕೊಂಡ ನಷ್ಟವನ್ನು ಸುಖಾಸುಮ್ಮನೇ ಸಭಿಕ, ಓದುಗ ಅನುಭವಿಸಿದಂತಾಗುತ್ತದೆಯಲ್ಲವೇ?

   ಹೀಗೆ ತೇಜಸ್ವಿ ಅವರನ್ನು ಕುರಿತಂತೆ ಇಂತದೊಂದು ತಪ್ಪು ಭಾಷಣವನ್ನು ಕೇಳಿದ ಕಾರ್ಯಕ್ರಮದಲ್ಲಿದ್ದ ಲೇಖಕರು (ಡಾ.ಸಿ.ಜಿ.ಲಕ್ಷ್ಮೀಪತಿ) ತಮ್ಮ ಲೇಖನದಲ್ಲಿ ವಿಶ್ಲೇಷಣೆಗೊಳಪಡಿಸಿ ಗ್ರಹಿಕೆಗೆ ತಂದುಕೊಳ್ಳುವಾಗ ಮೇಲುವರ್ಗದವರು ಕೇಳವರ್ಗದವನ್ನು ಯಾವ ದೃಷ್ಟಿಕೋನದಲ್ಲಿ ನೋಡುತ್ತಿದ್ದರು, ಹಾಗೇ ಮೇಲುಸ್ತರದ ಪಾತ್ರಗಳು ತಳ ಸಮುದಾಯದವರನ್ನು ಮಾತಿನಲ್ಲಿ ಹೇಗೆ ಸಂಬೋಧನೆಮಾಡುತ್ತಿದ್ದರು ಎಂಬುವುದಾಗಿ ಹೇಳಿ ಮುಂದಿನ ಭಾಷಣಕಾರರು ಇಲ್ಲಿನ ಭಾಷಣಕಾರರಂತೆ ತಪ್ಪುತಪ್ಪಾಗಿ ಅರ್ಥೈಸಬಾರದೆಂದು ವಿವರಿಸಿದ್ದರೆ ಅರ್ಥಪೂರ್ಣವಾಗುತ್ತಿತ್ತು. ಆದರೆ ಲೇಖಕರು ಇಲ್ಲಿನ ತಮ್ಮ ಲೇಖನದಲ್ಲಿ ಇದು ಮೂಲ ಲೇಖಕನನ್ನು (ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ) ಕ್ಯಾಸ್ಟ್ ಕೆಮಿಸ್ಟ್ರಿಯ ಹಿನ್ನೆಲೆಯೊಳಗೆ ನೋಡಬೇಕಾಗುತ್ತದೆ ಎಂಬರ್ಥದಲ್ಲಿ ಲೇಖನ ಬರೆದಿದ್ದಾರೆ. ಅದರಂತೆ ಕಥೆಗಾರ ತೇಜಸ್ವಿಯವರು ಹುಟ್ಟಿನ ಕಾರಣವಾಗಿ ಎತ್ತರ ಸ್ತರದ ಜಾತಿಯವರಾದುದರಿಂದಲೇ ಪರಿಸರದ ಕಥೆಯ ಕೆಳಸ್ತರದ ಎಂಗ್ಟನಿಗೆ ಇಂತದೊಂದು ಅಮಾನವೀಯ ಬೈಗುಳವನ್ನು ಬಳಸಿದ್ದಾರೆಂದು ವಿಶ್ಲೇಷಣೆ ಮಾಡಿದ್ದಾರೆ. ಆದರಿದೂ ಕೂಡ ತಪ್ಪುಗ್ರಹಿಕೆಯಿಂದ ಕೂಡಿದೆ ಎಂಬುವುದು ನನ್ನ ಅಭಿಪ್ರಾಯ. ಇದಕ್ಕೆ ಸಂಬಂಧಿಸಿ ನಾನು ನನ್ನ ಸಹೃದಯಿ ಅಕ್ಷರ ಸಂಗಾತಿಗಳೊಡನೆ ಚರ್ಚೆಮಾಡಿದ ಕೆಲವು ಅಂಶಗಳೂ ಒಳಗೊಂಡಂತೆ ಮುಂದಿನ ಪ್ಯಾರಾಗಳಲ್ಲಿ ವಿಭಿನ್ನ ನೋಟಗಳಲ್ಲಿ ವಿವೇಚನೆಗೊಳಪಡಿಸಿರುವೆ ಗಮನಿಸಿ.

   ಮಾಸ್ತಿ ಮತ್ತು ಬೈರ ತೇಜಸ್ವಿ ಅವರ ಕಥನ ಸಾಹಿತ್ಯದಲ್ಲಿ ಒಡಮೂಡಿ ಬಂದ ಪಾತ್ರಗಳು. ಅವುಗಳನ್ನು ಮೂಡಿಗೆರೆಯ ತೇಜಸ್ವಿ ಬದುಕಿದ್ದ ಕಾಲಘಟ್ಟದ ಪರಿಸದಲ್ಲಿ ಹೇಗೆ ಸಂಬೋಧನೆ ಮಾಡಲಾಗುತಿತ್ತು? ಗುರುತಿಸಲಾಗುತಿತ್ತು? ಎಂಬುವುದರ ಆಧಾರದ ಮೇಲೆ ಸಂದರ್ಭದ ಕಥನ ಸೃಜನಶೀಲ ಪ್ರತಿಭೆಯ ಅಂತಃದೃಷ್ಟಿಯಿಂ ಸೃಜಿಸಿರಲ್ಪಟ್ಟಿರುತ್ತದೆ. ನಿಟ್ಟಿನಲ್ಲಿ ನಮ್ಮ ಈಗಿನ ವರ್ತಮಾನದ ವಿಶ್ಲೇಷಣೆ ಆಗಿನ ಕಾಲಘಟ್ಟಕ್ಕೆ ತೆರಳಿ ನೋಡಬೇಕೇ ಹೊರತು. ಅದನ್ನು ಬಿಟ್ಟು ಈಗಿನ ಸಂದರ್ಭದಲ್ಲಿ ನಿಂತು ತಮ್ಮ ಕಣ್ಣಿಗೆ ಕಂಡ ಸೀಮಿತ ದೃಷ್ಟಿಯಲ್ಲಿ ವಿವರಿಸುವುದಲ್ಲ! ಕುವೆಂಪು ಅವರನ್ನು ಅವರು ನಿಧನರಾದ ತರುವಾಯ ಅವರು ನಮ್ಮ ನೆಂಟ/ಜಾತಿಯವರು ಎಂದೆಲ್ಲ ಕೆಲವು ಒಕ್ಕಲಿಗ ಮಹಾಶಯರೆನಿಸಿಕೊಂಡವರು ಒಕ್ಕಲಿಗರ ಸಂಘಕ್ಕೆ ಅವರ ಪಟ/ಹೆಸರು ಇಡಲು ಪ್ರಯತ್ನ ಪಡುತ್ತಿದ್ದಾಗ ಅದನ್ನು ಮೊದಲು ಖಂಡಿಸಿದವರು ತೇಜಸ್ವಿ. ಕುವೆಂಪು ನಿಧನರಾಗಿದ್ದಾಗ ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಕುವೆಂಪು  ಅವರ ಶವವನ್ನು ಹೂಳಿ ಅಲ್ಲಿ ಅವರ ಸಮಾಧಿ ನಿರ್ಮಾಣ ಮಾಡಬೇಕೆಂಬ ಕೆಲವು ಮಹಾನ್ ದೊಡ್ಡವರೆನಿಸಿಕೊಂಡವರ ಅರ್ಥವಿಲ್ಲದ ಯೋಚನೆಗಳನ್ನು ತಡೆದವರು ಇದೇ ತೇಜಸ್ವಿ. ಮೂಡಿಗೆರೆಯ ಒಕ್ಕಲಿಗರ ಪ್ರಭಾವ ಇರುವ ಪ್ರದೇಶದಲ್ಲಿ ಇದ್ದವರಾದರೂ ಒಕ್ಕಲಿಗರ ಸಂಘದ ಶ್ರೀಮಂತರ ಕೂಟಗಳಲ್ಲಿ ಸಮಯ ಕಳೆಯದೆ ಮೂಡಿಗೆರೆ ಪೇಟೆಯ ಬೀದಿ ಬೀದಿಗಳಲ್ಲಿ ಸರ್ವ ಜನಾಂಗದ ಸಹೃದಯಿಗಳೊಡನೆ ಅಂತಸ್ತು ಮತ್ತು ಇಮೇಜಿನ ಅಂತರವಿಲ್ಲದೆ ಬೆರೆತು ಬೆಳೆದು ಬರೆದವರು ಇದೇ ತೇಜಸ್ವಿ. ಅದಲ್ಲದೆ ಕಾಡು ಮೇಡು ಇಳಿಜಾರು ಪ್ರದೇಶಗಳಲ್ಲಿ ಅಲೆದಾಡಿ ನಮ್ಮಂತೆ ನಿಮಗೂ ಬದುಕುವ ಹಕ್ಕಿದೆ ಎಂದು ಹಕ್ಕಿಗಳು ಸೇರಿದಂತೆ ಪ್ರಾಣಿ, ಕೀಟ ಪ್ರಪಂಚದಲ್ಲಿ ಒಡನಾಡಿದವರು  ತೇಜಸ್ವಿ. ಕೊನೆಗೊ ನೆನಪಿಡಬೇಕಿರುವುದು ಮುಖ್ಯವಾಗಿ ಏನು ಗೊತ್ತಾ? ಕುವೆಂಪು ಅವರನ್ನು ಒಕ್ಕಲಿಗ ಎಂಬ ಬೇಲಿಯಲ್ಲಿ ಬಂಧಿಸಲು ಬಂದವರಿಗೆ ಅವರು ವಿಶ್ವಮಾನವ ಎಂಬ ಕಾವಲುಗಾರನಾಗಿ ಒಂದಷ್ಟು ಅರ್ಧ ಶತಮಾನಗಳ ಕಾಲ ರಕ್ಷಣೆ ಒದಗಿಸಿ ಕಾಪಾಡಿದವರು ಕೂಡ ತೇಜಸ್ವಿ! ಅದಕ್ಕೆ ಒಬ್ಬ ಲೇಖಕನನ್ನು ಸಮಗ್ರವಾಗಿ ಓದಿಕೊಳ್ಳಬೇಕು. ಮತ್ತು ಅವನು ಬರೆದ ಕಾಲಘಟ್ಟದಲ್ಲಿ ಏನಿತ್ತು? ಹೇಗಿತ್ತು? ಅದನ್ನು ಕಲಾಕೃತಿಯಲ್ಲಿ ಹೇಗೆ ವಾಸ್ತವವಾಗಿ ಕಟ್ಟಿಕೊಡಲಾಯ್ತು ಎಂಬುವುದನ್ನು ವಿವೇಚಿಸಬೇಕೆ  ವಿನಃ ತಾನೀಗ ಆಲೋಚನೆ ಮಾಡುತ್ತಿದ್ದೇನಲ್ಲ! ಹಾಗೇ ಅವನಾಗಲೂ ಬರೆಯಬೇಕಿತ್ತು ಎಂದುಕೊಳ್ಳುವುದು ಏನು? ಚಿದಂಬರ ರಹಸ್ಯದ  "ರಫೀ ಮತ್ತು ಜಯಂತಿ" ಯನ್ನು ಈಗಿನ ಕಾಲಕ್ಕೆ ಎಳೆತಂದು ಅದು ಲವ್ ಜಿಹಾದ್! ತೇಜಸ್ವಿ ಅವರು ಹಾಗೆ ಏಕೆ ಬರೆಯಬೇಕಿತ್ತೆಂದು ಪ್ರಶ್ನಿಸಬಹುದೇ!? ಅದು ರಚನೆಯಾಗಿರುವ ಕಾಲ ಸಂದರ್ಭದಲ್ಲಿ ಪರಿಕಲ್ಪನೆಯೇ ಇರಲಿಲ್ಲವಲ್ಲ! ಆದ್ದರಿಂದ ಗಂಭೀರವಾಗಿ ಗಮನಿಸಿದರೆ ಈಗಿನ ಬಹುತೇಕ ವಿಮರ್ಶೆ ವಿವೇಕ ಕಳೆದುಕೊಳ್ಳುತ್ತಿದೆ. ಏನು ಮಾಡೋಣ? ಈಗೀಗ ವಿಚಾರಕ್ಕೂ ಅಪಚಾರವೇ? ಎಂದು ಕಾಡಿ ಇತ್ತೀಚಿನ ಇಂತಹ ವಿಮರ್ಶೆಗಳನ್ನು ಓದಿದಾಗಛೇ!’ ಎಂದುಕೊಳ್ಳುವುದಷ್ಟೇ ಕ್ಷಣದ ಅದರ ಓದಿಗೆ ತಕ್ಷಣದ ಪ್ರತಿಕ್ರಿಯೆಯಾಗಿರುತ್ತದೆ.

    ನಮಗೆ ಈವರೆಗಿನ ವಿಚಾರವಿಮರ್ಶೆ ಹಾಗೂ ಸಂಶೋಧನೆಯ ಪಾಠ - ಪಠ್ಯಕ್ರಮಗಳಲ್ಲಿ ಹೇಳಿಕೊಟ್ಟಿರುವುದೇನು? ಒಬ್ಬ ಲೇಖಕ ಅಥವಾ ಚಿಂತಕನನ್ನು ಪೂರ್ಣದೃಷ್ಟಿಯಿಂದ ಓದಿ ಅರ್ಥಮಾಡಿಕೊಳ್ಳಬೇಕೆಂದರೆ ಅವನ ಎಲ್ಲಾ ಕಾರ್ಯಚಟುವಟಿಕೆಗಳು, ಬರಹ, ಭಾಷಣ, ಚಿಂತನೆಗಳನ್ನು ಸಮಗ್ರವಾಗಿ ಅವಲೋಕನ ಮಾಡಿದ ನಂತರ ತಾವು ಆತನನ್ನು ಮತ್ತು ಆತನ ವಿಚಾರಗಳನ್ನು ಕುರಿತು ಕಂಡುಕೊಳ್ಳಲು ಹೊರಟಿರುವ ಅಧ್ಯಯನದ ದೃಷ್ಟಿಕೋನದ ಹಿನ್ನೆಲೆಯಲ್ಲಿ ಅವನು ಏನಾಗಿದ್ದ? ಅವನ ವಿಚಾರಧಾರೆ ಏನಾಗಿತ್ತೆಂಬುವುದು ಮುಖ್ಯವಾಗಿ ಅರಿವಿಗೆ ತಂದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈಗೀಗ ಮೂಲ ಲೇಖಕರ ಕೃತಿಗಳನ್ನು ಓದಿಕೊಂಡು ಸ್ವತಃ ಅನಿಸಿದ್ದನ್ನು ವಿಮರ್ಶೆ - ವಿಶ್ಲೇಷಣೆ ಮಾಡದೆ ಅದರ ಕುರಿತು ಯಾರೋ ಮಾಡಿದ ಭಾಷಣ ಕೇಳಿ ಅಥವಾ ಬರಹವನ್ನು ಓದಿ ಮತ್ತೆ ಅದಕ್ಕೇ ಇನ್ನೊಂದು ವಿಮರ್ಶೆ ಉದ್ದಮಾಡಿ ಅಥವಾ ಉದ್ದುದ್ದ ಮಾತನಾಡಿ.. ಮೂಲ ಬರಹಗಾರನನ್ನು ಹಿಂಡಿ ಹಿಪ್ಪೆಮಾಡಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯವೇ ಸರಿ.

      ಅದರಂತೆ ಇಲ್ಲಿ ಮುಖ್ಯವಾಗಿ ತೇಜಸ್ವಿ ಅವರ ಬಗ್ಗೆ ಅಭಿಪ್ರಾಯವನ್ನು ಲಕ್ಷ್ಮೀಪತಿ ಅವರು ತಾಳಲು ಸೇನಾನಿ ಅವರ ಅಲ್ಲಿನ ಭಾಷಣ! ಉದಾಹರಣೆಗೆ ತೇಜಸ್ವಿ ಅವರುಎಂಗ್ಟನ ಪುಂಗಿ' ಕಥೆಯಲ್ಲಿ ಎಂಗ್ಟನ ಪಾತ್ರವನ್ನು ಚಿತ್ರಣ ಮಾಡುವಾಗ ಬಳಸಿರುವ ಬೈಗುಳವನ್ನು ಸೇನಾನಿ ಸಂಭ್ರಮಿಸಿದರು ಎಂದು! ಇಲ್ಲಿ ಬೈಗುಳವನ್ನು ಲೇಖಕ ತೇಜಸ್ವಿ ಅವರು ಬಳಸಿರುವುದು ಎಂದು ತೆಗೆದುಕೊಂಡರೆ ಅದಲ್ಲ! ಮತ್ತೇನು? ಕಥೆ! ಕಥನದಲ್ಲಿ ಎಂಗ್ಟನನ್ನು ಕುರಿತು ಕರಿಯಪ್ಪ ಹಾಗೆಂದವ! ಹಾಗಾದರೆ ಕರಿಯಪ್ಪನ ಜಾತಿ ಹುಡುಕಿ ನೋಡಬೇಕು! ಅಂದರೆ ಕರಿಯಪ್ಪ ಎಂಗ್ಟನನ್ನು ಸಂಬೋಧಿಸುವ ಮನೋಸ್ಥಿತಿಯಲ್ಲಿ ಜಾತಿ ಶ್ರೇಷ್ಠವಾದ ಆಂತರ್ಯ ಕೆಲಸ ಮಾಡಿದೆಯಾ? ಎಂದು ಗೊತ್ತಾಗುತ್ತದೆ. ಆಗ ಒಂದು ಜಾತಿಯವರು ಇನ್ನೊಂದು ಜಾತಿಯವರನ್ನು ಮಾತಿನಲ್ಲಿ  ಪ್ರಾದೇಶಿಕವಾಗಿ ತೇಜಸ್ವಿ ಅವರು ಬರೆಯುತ್ತಿದ್ದ ಕಾಲ ಸಂದರ್ಭದಲ್ಲಿ ಹೇಗೆ ಸಂಬೋಧನೆ ಮಾಡುತ್ತಿದ್ದರು, ನಡೆಸಿಕೊಳ್ಳುತ್ತಿದ್ದರು ಎನ್ನುವುದು ತಿಳಿಯುತ್ತದೆ. ಇಲ್ಲಿ ಕಥೆಗಾರ ಅದನ್ನು ಚಿತ್ರಿಸಿರುವ ಚಿತ್ರಕಾರನಷ್ಟೇಯಲ್ಲವೇ! ಅವನು ಹೇಗೆ ಸಂಬೋಧನಾಕಾರನಾಗುತ್ತಾನೆ? ಸೇನಾನಿಯವರು ಅದನ್ನು ತಮ್ಮ ಭಾಷಣದಲ್ಲಿ ಸಂಭ್ರಮಿಸಿದರು ಎನ್ನುವುದಾದರೆ ಕರಿಯಪ್ಪನ ಸ್ಥಾನದವರಂತೆ ಇವರು ಏಕೆ ಹಾಗೇ ಇಲ್ಲಿ ಆಲೋಚನೆ ಮಾಡುತ್ತಿದ್ದಾರೆ? ಎಂಬುದನ್ನು ಎಂಗ್ಟನಿಗೆ ಮುಖ್ಯವಾಗಿ ಅಭಿಮುಖಿಯಾಗಿಸಿ ಕಣ್ತೆರೆದು ನೋಡಬೇಕು. ಅವರು (ಸೇನಾನಿ) ತೇಜಸ್ವಿಯವರಿಗೆ ಸಂಬಂಧದಲ್ಲಿ ನೆಂಟರಾಗಿದ್ದರೂ ಅವರಲ್ಲಿ(ಸೇನಾನಿಯವರಲ್ಲಿ) ಹುಟ್ಟಿನ ಜಾತಿ ಶ್ರೇಷ್ಠವಾದ ಭಾವ ಇನ್ನೂ ಮಾಸಿಲ್ಲವಾ? ಎಂಬುದನ್ನು ಪ್ರಶ್ನಾತ್ಮಕವಾಗಿ ಇನ್ನೂ ಆಳಕ್ಕಿಳಿದು ವಿವೇಚನೆಗೊಳಪಡಿಸಬೇಕಾಗುತ್ತದೆ. ಆದರೆ ಕೃತಿಯಲ್ಲಿ ಸಮಾಜದ ದೃಶ್ಯಾವಳಿಗಳಿಗೆ ಕನ್ನಡಿ ಹಿಡಿಯುವ ಕಥೆಗಾರನ ಚಿತ್ರಣವು ಯಥಾವತ್ ಇದ್ದಂತೆಯೇ ಇದೆ. ಹೀಗಾಗಿ ದಲಿತ ಇಲ್ಲವೆ ಬುಡಕಟ್ಟು ಸಮುದಾಯದ ಪಾತ್ರವನ್ನು ಕುರಿತಂತೆ ಕಥೆಯಲ್ಲಿ ಮಾತಾಡಿರುವ ಕರಿಯಪ್ಪ ಎಂಬ ಪಾತ್ರದ್ದು ಜಾತಿದೃಷ್ಟಿಕೋನದ್ದು ಎಂದು ವಿಶ್ಲೇಷಿದರೆ ಅಡ್ಡಿಯಿಲ್ಲ. ಜೊತೆಗೆ ಭಾಷಣದಲ್ಲಿ ಸಂಭ್ರಮಿಸಿರಬಹುದಾದ ಸೇನಾನಿಯವರದು ಕ್ಷಣದ ಮನೋಸ್ಥಿತಿ ಏನಾಗಿತ್ತು? ಅದನ್ನು ಮೂಡಿಗೆರೆಯ ಭಾಗದಲ್ಲಿ ತೇಜಸ್ವಿಯವರು ಬರೆಯುವ ಕಾಲಘಟ್ಟದಲ್ಲಿ ಎಲ್ಲ ವರ್ಗದವರ ಬಾಯಲ್ಲಿ  ಪರಸ್ಪರ ಸಹಜವೆಂಬಂತೆ ಬಳಸುತ್ತಿದ್ದ ಬೈಗುಳಗಳು ಎಂಬುದಷ್ಟೇ ಇತ್ತಾ? ಎಂಬುವುದನ್ನು ವಿವೇಚಿಸಬೇಕು. (ಹಾಗೇ ಅಲ್ಲಿ ಸೇನಾನಿ ಮಾತನಾಡಿದಂತೆ ತೋರುತ್ತದೆ. ಇದನ್ನೇ ಲಕ್ಷ್ಮೀಪತಿಯವರು ಇದೆಷ್ಟು ಸರಿ ಎಂದು ಪ್ರಶ್ನೆ ಎತ್ತಿರುವುದನ್ನು ಅವರು ನಂತರ ಬರೆದ ಲೇಖನದಲ್ಲಿ ಕಂಡುಬರುತ್ತದೆ.) ಅದೇನೇ ಇದ್ದರೂ ತೇಜಸ್ವಿಯದು ರಚನೆಯಷ್ಟೇ. ಆಗ ವಿಮರ್ಶೆ ಕಥಾಪಾತ್ರ ಕರಿಯಪ್ಪನನ್ನು ಹಾಗೂ ಅದನ್ನು ಪ್ರತಿನಿಧಿಸಿ ಮಾತನಾಡಿದ ಸೇನಾನಿಯವರನ್ನು ಕೈಬಿಟ್ಟು ಕಥೆಗಾರನ ಕೈಹಿಡಿದು ಕಟ್ಟಿ ಕೇಳುವುದಲ್ಲ! ಆದ್ದರಿಂದ ಇಲ್ಲಿ ಕರಿಯಪ್ಪ ಮತ್ತು ಸೇನಾನಿಯ ಮನೋಸ್ಥಿತಿಯನ್ನು ವಿಶ್ಲೇಷಣೆಗೆ ಒಳಪಡಿಸುವುದು ಮಾತ್ರ ಮುಖ್ಯವಾಗುತ್ತದೆ.  ಇದನ್ನು ಕರಿಯಪ್ಪನ ವಿಚಾರದಲ್ಲಿ  ತೇಜಸ್ವಿ ನಮಗೆ ಈಗಾಗಲೇ ತೆರದಿಟ್ಟಿದ್ದಾರೆ. ಹೀಗೇ ಸೇನಾನಿ ಅವರ ಹಿನ್ನೆಲೆಯಲ್ಲಿ ನಾವಿಂದು ಅದನ್ನು ನೋಡಬೇಕಷ್ಟೇ.

    ಇಲ್ಲೇ ಗಮನಿಸಬೇಕಾದ ಬಹುಮುಖ್ಯವಾದದ್ದುತಬರನ ಕಥೆ'. ಇಲ್ಲಿನ ತಬರಶೆಟ್ಟಿಯ ವ್ಯಥೆಯ ಚಿತ್ರಣವನ್ನು ಮಾಡುವ ಸಂದರ್ಭದಲ್ಲಿ ತೇಜಸ್ವಿ ಅವರುಅವನಿಗೆ ಹುಚ್ಚು ಹಿಡಿದಿದೆ ಎಂದು ಪಡುಗೆರೆಯ ಜನ ಮಾತನಾಡಿಕೊಂಡರುಎಂದು ಬರೆದಿದ್ದಾರೆ! ಹಾಗಂತ ಹೀಗೆ ತಬರಶೆಟ್ಟಿಗೆ ಹುಚ್ಚನ ಪಟ್ಟವನ್ನು ಕಥೆಗಾರ ಏಕೆ ಕಟ್ಟಬೇಕಿತ್ತು? ಎಂದು ಶೆಟ್ಟರ ಸಂಘಟನೆವೊಂದು ಪ್ರತಿಭಟನೆ ಮಾಡಲಾದೀತೆ? ಅದು ಹೊತ್ತಿನಲ್ಲಿ ಇದ್ದ ಶೋಷಣೆಯ ಪರಿಸ್ಥಿತಿಯಲ್ಲಿ ವಿವರಿಸಿರುವುದು. ಅಲ್ಲಿ ವಿವರಣೆಕಾರ (ಕಥೆಗಾರ) ತೇಜಸ್ವಿಯಷ್ಟೇ. ತಬರಶೆಟ್ಟಿಗೆ ಹುಚ್ಚು ಹಿಡಿದಿದೆ ಎಂದಿರುವವರು ತೇಜಸ್ವಿಯವರಲ್ಲ ಪಡುಗೆರೆಯ ಜನ! ಈಗ ವಿಮರ್ಶಕ ತರಾಟೆಗೆ ಅಥವಾ ಪ್ರಶಂಸೆಗೆ ತೆಗೆದುಕೊಳ್ಳಬೇಕಾದ್ದು ಪಡುಗೆರೆಯ ಆಗಿನ ಜನರ ಭಾವಜಗತ್ತನ್ನು. ಅದನ್ನು ನಮಗೆ ಬರೆದು ಓದಿಸಿದ ಕಥೆಗಾರನ್ನಲ್ಲ! ಹಾಗೇ ನೋಡಿದರೆ ತೇಜಸ್ವಿ ಅವರ ಹೆಂಡತಿಯವರ ಜಾತಿಯೂ ತಬರಶೆಟ್ಟಿಯದೇ! (ಗಮನಿಸಿ: ತೇಜಸ್ವಿ ಪ್ರೀತಿಯಲ್ಲಿ ವಿಶ್ವಮಾನವನೇ ಆಗಿದ್ದವರು! ಅವರದು ಅಂತರ್ಜಾತಿಯ ವಿವಾಹ. ಇಬ್ಬರದೂ ಹುಟ್ಟಿನ ಜಾತಿ ಬೇರೆಬೇರೆ. ಬದುಕಿನ ರೀತಿ ಪ್ರೀತಿವೊಂದೇ!) ಹೀಗೆ ತೇಜಸ್ವಿ  ಅವರು ಸಂಬಂಧದ ಹಿನ್ನೆಲೆಯಲ್ಲಿ ನೆಂಟರ ಪಾತ್ರವಾಗಿರುವುದನ್ನೂ ಹಾಗೇ ಪ್ರಾಮಾಣಿಕ ದೃಷ್ಟಿಕೋನದಲ್ಲಿ ಚಿತ್ರಣಮಾಡಿರುವುದು ತೋರುತ್ತದೆ. ಶೋಷಣೆಗೆ ಒಳಗಾಗುವ ತಬರನು ತನ್ನ ಹೆಂಡತಿಗೆ ಕೊನೆಗೂ ಕಾಲನ್ನು ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಿ ಆಪರೇಷನ್ ಮಾಡಿಸಲು ಆಗದೆ ಮಾಂಸದ ಮಾರ್ಕೆಟ್ಗೆ ಹೋಗಿ ಕಾಲಿನ ಗ್ಯಾಗ್ರಿಂಗ್ ಆದ ಭಾಗವನ್ನು ಅದರ ಸಮೇತ ಕತ್ತರಿಸಿ ಕೊಡ್ತೀಯಾ ಎಂದು ಕೇಳುವುದು ಈಗಿನ ಹೊಟ್ಟೆ ತುಂಬಿದ ಭಾಷಣಕಾರ ಅಥವಾ ಸಭಿಕನಿಗೆ ನಗುವಿನ ತಮಾಷೆಯಂತೆ ಕಂಡರೆ ಹಸಿವಿನ ಬವಣೆಗಾರನಿಗೆ ಕಣ್ಣೀರು ಸುರಿಯುವಂತೆ ಮಾಡುತ್ತೆ! ಬಗ್ಗೆ ಹೊಟ್ಟೆ ತುಂಬಿದವ ತಮಾಷೆ ಚೆನ್ನಾಗಿದೆ ಎಂದು ನಗಾಡಿ ನಗಾಡಿಸಿದರೆ ಅದು ತೇಜಸ್ವಿ ಅವರ ತಪ್ಪಲ್ಲ! ಅದರ ಮೂಲ ಭಾವನೆಗಳಿಗೆ ಪ್ರತಿಸ್ಪಂದನ ಸಂವೇದನಾ ಗುಣವಿಲ್ಲದನ ಸಣ್ಣತನದ್ದು! ನಮ್ಮ ವಿಮರ್ಶೆಯ ದೃಷ್ಟಿಕೋನ ಹೀಗಿದ್ದರೆ ಹೇಗೆ? ಇದನ್ನು ಓದುತ್ತಿರುವ ಪ್ರೀತಿಯ ಓದುಗರೇ ಹೇಳಬೇಕು.

      ಕುರಿತಂತೆ ತೇಜಸ್ವಿಯವರು ಈಗಲೂ ಭೌತಿಕವಾಗಿ ಬದುಕಿದ್ದರೆ ತಾನು ಏಕೆ ಆಗ ಹೀಗೆ ಬರೆದೆ ಎಂದು ವಿವರಿಸುತ್ತಿದ್ದರಲ್ಲವೇ? ಹಾಗಂತ ಇಲ್ಲಿ ತೇಜಸ್ವಿ ಬದುಕಿದ್ದಾಗಲೇ ತಕರಾರು ತೆಗೆಯಬೇಕಿತ್ತೆಂದು ನಾನು ಹೇಳುತ್ತಿಲ್ಲ. ಅವರು ಬದುಕಿದ್ದ ಕಾಲಘಟ್ಟದಲ್ಲಿನ ಹಿನ್ನೆಲೆಯಲ್ಲೇ ಕಥೆಯನ್ನು ವಿಶ್ಲೇಷಣೆ ಮಾಡಬೇಕೆಂದು. ಆದ್ದರಿಂದ ಅದನ್ನು ಈಗಿನ ಕಾಲದಲ್ಲಿ ಇಟ್ಟು ನೋಡುವುದು ವಿಚಾರಾತ್ಮಕವಾಗಿರಬೇಕೇ ವಿನಾ ಹುಸಿ ಪ್ರಚಾರದಿ ಪ್ರಚೋದನಾತ್ಮಕವಾಗಿರಬಾರದೆಂದು ಹೇಳುತ್ತಿದ್ದೆನಷ್ಟೇ. ಉದಾಹರಣೆಗೆ ತೇಜಸ್ವಿ ಅವರ ಭೌತಿಕ ಬದುಕಿನ ಕಾಲಘಟ್ಟದಲ್ಲಿ  ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಒಂದಷ್ಟು ಉನ್ನತ ವರ್ಗದಲ್ಲಿ (ವಿಶೇಷವಾಗಿ ಮೂಡಿಗೆರೆಯಲ್ಲಿ) ಗುರುತಿಸಿಕೊಂಡಿದ್ದವರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ದಲಿತ ಸಮುದಾಯವರನ್ನು ಏಕವಚನದಲ್ಲಿ ಎಂಗ್ಟನನ್ನು ಕರೆದಂತೆ ತಾತ್ಸಾರ ಭಾವದಲ್ಲಿ ಕರೆಯುತ್ತಿದ್ದರು ಎಂಬುವುದು ಅಕ್ಷರಶಹ ಸತ್ಯ. ಜೊತೆಗೆ ತಮ್ಮದೇ ಜಾತಿಯ ಬಡ ಕೆಲಸಗಾರರನ್ನು ಕೂಡ ಹೆಚ್ಚುಕಡಿಮೆ ಹಾಗೇ ಕರೆಯುತ್ತಿದ್ದುದು ದಿಟ. ಇಲ್ಲಿ ಸಾಮಾಜಿಕ ಜಾತಿಯಷ್ಟೇ ಆರ್ಥಿಕ ವರ್ಗ ಶ್ರೇಷ್ಠತೆಯೂ ಮುಖ್ಯ ಕಾರಣವಾಗಿದೆ. ಏನ್ಲಾ ಹೋಗ್ಲಾ ಬಾರ್ಲಾ ಎಂದೆಲ್ಲ! ಆದರೆ ಅದೀಗ ಏನ್ರೀ, ಹೋಗಿ, ಬನ್ನಿ ಎಂಬುದಾಗಿ ಪದಭಾಷೆಯು ಬದಲಾವಣೆಗೊಳಪಡುತ್ತಿದೆ. ಹಾಗೇ ಯಾರಾದರೂ ಕಾರಣವಾಗಿ ಭಾವನಾತ್ಮಕವಾಗಿ ನಿಂದನೆ ಮಾಡಿದರೆ ಕೇಸುಕೊಡುವಷ್ಟು ತಿಳುವಳಿಕೆ ಹಾಗೂ ಸಶಕ್ತತೆ ವರ್ಗದವರಲ್ಲಿ ಹಂತಹಂತವಾಗಿ ಬೆಳವಣಿಗೆ ಈಗ ಕಾಣುತ್ತಿದೆ. ಅದರಂತೆ ದಲಿತ ಸಮುದಾಯದ ಗೆಳೆಯರು ತಮ್ಮ ಓರಗೆಯ ಇತರ ವರ್ಗದ ಗೆಳೆಯರನ್ನು ಬಾರೋ, ಹೋಗೋ ಎಂದು ಕರೆವಷ್ಟು ಆತ್ಮಾಭಿಮಾನವನ್ನು ಹೊಂದಿದವರಾಗಿ ಬೆಳವಣಿಗೆ ಕಂಡುಕೊಂಡಿದ್ದಾರೆ. ಇದನ್ನು ಸ್ವತಃ ತೇಜಸ್ವಿ ಬದುಕಿದ್ದ ಪರಿಸರದವನಾಗಿ ನಾನೂ ಕಂಡುಕೊಂಡಿದ್ದೇನೆ. ಆದರೆ ಆಗಿನ ಹಿಂದಿನ ಸಂದರ್ಭವನ್ನು ಈಗ ಬದುಕಿರುವ ನಮ್ಮ ತುಂಬಾ ಹಿರಿಯ ವಯಸ್ಸಿನವರಲ್ಲಿ ಕುರಿತು ನಾವು ಅಭಿಪ್ರಾಯ ಕೇಳಿದರೆ  ಅವರು ಹೇಳುವುದು ಏನೆಂದರೆಯಾರಾದರೂ ಏನಾದರೂ ಅಂದುಕೊಳ್ಳಲಿ ನಮಗೇನು? ನಾವು ದುಡಿದಿದ್ದಕ್ಕೆ ಒಂದು  ಹೊತ್ತಿನ ಕೂಳಿಗೆ ಸಂಪಾದನೆ ಆದರೆ ಸಾಕು! ಅಂದುಕೊಂಡ ಸಂಕಷ್ಟ ಪರಿಸ್ಥಿತಿ ಅಂದಿನದಾಗಿತ್ತು!” ಎಂದು! ಇದು ಈಗಲೂ ಬದಲಾಗಿಲ್ಲ ನೋಡಿ. ಅಂದೇನು ಸಾಮಾಜಿಕ ಕಟ್ಟುಪಾಡುಗಳ ಹಿನ್ನೆಲೆಯ ಶೋಷಣೆಯ ಮನೋಸ್ಥಿತಿ ಇತ್ತೋ ಅದೀಗ ವರ್ತಮಾನದಲ್ಲಿ ಆರ್ಥಿಕತೆಯ ಅಂತಸ್ತಿನ ನೆಲೆಯೊಳಗೆ ಬೇರೆಯದ್ದೇ ಆಗಿ ಅಲ್ಲಲ್ಲಿ ವಿಶೇಷವಾಗಿ ಅವಲೋಕಿಸಿದರೆ ಕಂಡುಬರುತ್ತಿರುತ್ತದೆ. ಗಮನಿಸಿದಂತೆ ಕೆಲವು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳುವ ಕೆಲವು ಮೇಷ್ಟರುಗಳೇ ತಮಗಿಂತ ಎರಡು ಪಟ್ಟು ಹಿರಿಯರಾಗಿದ್ದರೂ ಅಟೆಂಡರ್ಗಳನ್ನುಬಾ ಇಲ್ಲಿ ಕಸಗುಡಿಸು!' ಎಂದು ವೃತ್ತಿಸ್ತರದ ಭಾವದಲ್ಲಿ ಏಕವಚನದಲ್ಲಿ ಅದೂ ತಾತ್ಸಾರಭಾವದಿ ಕರೆಯುವುದನ್ನು ನೋಡಿರುತ್ತೇವೆಂದುಕೊಳ್ಳುವುದಾದರೆ ಇದನ್ನುಪ್ರಿನ್ಸಿಪಾಲ್ ಭೋಜಯ್ಯನವರು ಅಟೆಂಡರ್ ಕರಿಯಪ್ಪನವರನ್ನು  ಜೋರಾಗಿ ಕೂಗಿ ಕರೆದು ಬಾ ಮಾರಾಯಾ ಇಲ್ಲಿ? ಕಸ ಹೊಡೆಯುವುದು ಬಿಟ್ಟು ಅಲ್ಲೇನು ಮಾಡ್ತಾ ಇದ್ದೆ? ಎಂದು ಗದರಿದರುಎಂದು ಈಗಿನ ಕಥೆಗಾರನೊಬ್ಬ ಬರೆದನೆಂದು ಪರಿಕಲ್ಪನೆಗೆ ತಂದುಕೊಳ್ಳುವುದಾದರೆ ಹಾಗೇ ಬರೆದಿದ್ದುದನ್ನು ಇನ್ನೊಂದು ಮೂವತ್ತು ವರ್ಷಗಳ ನಂತರ ಬದಲಾದ ಕಾಲಘಟ್ಟದ ಪರಿಸ್ಥಿತಿಯಲ್ಲಿ ಕಸ ಹೊಡೆಯುವ ಇಂದಿನ ಅಟೆಂಡರ್ ಅವರನ್ನು ಮಾತನಾಡಿಸುವ ಪ್ರೀನ್ಸಿಪಾಲ್ ಭೋಜಯ್ಯನವರ ಮಗ ಇಂದಿನ ಲೆಕ್ಚರರ್ ಸೋಮಯ್ಯ ಗೌರವ ಭಾವನೆಯಿಂದ ನಡೆಸಿಕೊಳ್ಳುವಷ್ಟು ಹೃದಯ ವೈಶಾಲ್ಯತೆಯ ಸಂದರ್ಭದಲ್ಲಿ ಆಗಿನ ಕಥೆಗಾರನಿಗೆ ಈಗಕರಿಯಪ್ಪನನ್ನು ಕುರಿತು ಏಕವಚನದಲ್ಲಿ ಏಕೆ ಕಥೆಗಾರ ಬರೆಯಬೇಕಿತ್ತು?” ಎಂದು ವಿಮರ್ಶೆಯಲ್ಲಿ ಕೇಳಲು ಬರುವುದಿಲ್ಲ! ಅದನ್ನುಕರಿಯಪ್ಪನನ್ನು ಕುರಿತು ನೀವು ಏಕೆ ಹಾಗೆ ಕರೆಯುತ್ತಿದ್ದಿರಿ?” ಎಂದು ಈಗಲೂ ಬದುಕಿದ್ದರೆ ಆಗಿನ ಪ್ರಿನ್ಸಿಪಾಲ್ ಭೋಜಯ್ಯನನ್ನು ಕೇಳಬೇಕಾಗುತ್ತದೆ, ಏನಂತೀರಿ? (ಹಾಗೇ ಕೇಳಲೂ ಕೂಡ ಅಸಾಧ್ಯವೇ ಸರಿ. ಇಲ್ಲಿ ಭೋಜಯ್ಯ ಹಾಗೂ ಕರಿಯಪ್ಪನನ್ನು ಕಥೆಗಾರನು ಸಮಕಾಲೀನ ಭಾವಜಗತ್ತನ್ನು ಸಹೃದಯರಿಗೆ ಪರಿಚಯಿಸಲು ಸೃಷ್ಟಿಸಿರುವ ಪಾತ್ರಗಳು ಎಂದುಕೊಳ್ಳಬೇಕಾಗುತ್ತದೆ. ಹಿನ್ನೆಲೆಯಲ್ಲಿ ಪಾತ್ರಗಳ ಮಾತುಗಳು, ಅದರ ಹಿನ್ನೆಲೆ, ಇದರಲ್ಲಿ ಯಾವ ಪಾತ್ರ ಅಮಾಯಕ, ಯಾವ ಪಾತ್ರ ಅಹಂಕಾರಿ ಎಂಬುವುದನ್ನು ವಿವೇಚಿಸುವುದಷ್ಟೇ ವಿಮರ್ಶೆಯಕಾರ್ಯ ಆಗಿರುತ್ತದೆ. ಅದನ್ನೇ ಹುಡುಕಿಕೊಂಡು ಹೋಗುವುದಾದರೂ ಹೇಗೆ?) ಚರ್ಚೆ ಶಿವರಾಮಕಾರಂತರ ಚೋಮನದುಡಿಯಲ್ಲೂ ಕೂಡ ಆಗಿಲ್ಲವೇ? "ಕಾರಂತರು ಚೋಮನಿಗೆ ಭೂಮಿ ಕೊಡಿಸಬೇಕಿತ್ತು!" ಅಂತ. ಇದೂ ಕಾರಂತರು ಹುಟ್ಟಿನ ಜಾತಿಯಲ್ಲಿ ಬ್ರಾಹ್ಮಣರು ಜಾತಿಯಲ್ಲಿ ಕೆಳವರ್ಗದವನಾದ ಚೋಮನಿಗೆ ಭೂಮಿ ಕೊಡಿಸಲು ಅವರಿಗೆ ಇಷ್ಟವಿರಲಿಲ್ಲ ಎಂಬ ಪೂರ್ವಾಗ್ರಹ ಮನೋಸ್ಥಿಯ ನೋಟ! ಸ್ವಾತಂತ್ರ್ಯಪೂರ್ವದ ಕಥನವಾದ ಇದನ್ನು ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ನಿಂತುಚೋಮನ ಮಕ್ಕಳು' ಎಂದು ಡಾ.ಸಿದ್ದಲಿಂಗಯ್ಯನವರು ಕವನದಲ್ಲಿ ಬರೆದಂತೆ ಇನ್ನೊಂದು ಕಲಾಕೃತಿಯಲ್ಲೇ ನೋಡಬೇಕೇ ಹೊರತು, ಅಂದಿನ ಪರಿಸ್ಥಿತಿಯಲ್ಲಿ ವ್ಯವಸ್ಥೆಯು ದಲಿತರಿಗೆ ಭೂಮಿಯನ್ನೆ ಕೊಡದ ದುಷ್ಟ ಮನಸ್ಥಿತಿಯನ್ನು ಕಾರಂತರು ಮಾನವೀಯ ಮನಸುಗಳಿಗೆ ಅರ್ಥೈಸಲು ಕಾದಂಬರಿ ಬರೆದರೆ ಕಾರಂತರು ಭೂಮಿ ಕೊಡಿಸಲಿಲ್ಲ ಎನ್ನಲು ಅವರು ಸಮಾಜದ ವಾಸ್ತವದ ಪರಿಸ್ಥಿಗೆ ಕನ್ನಡಿ ಹಿಡಿದ ಕಥೆಗಾರನಷ್ಟೇ! ಬ್ರಿಟಿಷ್ ಆಡಳಿತ ವ್ಯವಸ್ಥೆ ಕಾಲದ ಅಧಿಕಾರಿಯಲ್ಲವಲ್ಲ! ಹಾಗೆಂದು ವೇಳೆ ಕಾರಂತರು ಭೂಮಿಯನ್ನು ಕಥೆಯಲ್ಲಿ ಕೊಟ್ಟಂತೆ ಅವಾಸ್ತವಿಕವಾಗಿ ಚಿತ್ರಣ ಮಾಡಿದ್ದರೆ ಹೊತ್ತಿನಲ್ಲಿ ವಿಮರ್ಶೆ ಹೇಗೆ ಹೇಳುತಿತ್ತು ಗೊತ್ತಾ? ಇದು ಕಾರಂತರ ಸಿನಿಕತನ ಮನೋಸ್ಥಿಯ ಮಹಾಮೋಸವೇ ಸರಿ! ವಾಸ್ತವವಾಗಿ ಇಲ್ಲದಿದ್ದನ್ನು ಕಥೆಯಲ್ಲಿ ಪರಿಕಲ್ಪಿಸಿ ಕೊಟ್ಟು ಮೋಸ ಮಾಡಿದ್ದಾರೆ ಎಂದು! ಇದೇ ನಿಟ್ಟಿನಲ್ಲಿ ಗಮನಿಸುವುದಾದರೆ ದಲಿತ ಸಾಹಿತ್ಯ ಕಾಲಘಟ್ಟದ ಕಥೆಗಾರ ದೇವನೂರು ಮಹಾದೇವ ಅವರ ಒಡಲಾಳ ಕಥನದಲ್ಲಿನ ಸಾಕವ್ವಳು ಕಳೆದುಕೊಂಡ ತನ್ನ ಕೋಳಿಯನ್ನು ಹುಡುಕಿಕೊಡಿ ಎಂದು ಕಂಪ್ಲೇಂಟು ಕೊಟ್ಟರೆ ಪೋಲಿಸರು ಹುಡುಕಿ ಕೊಡುವುದಿಲ್ಲ. ಬದಲಿಗೆ ಹುಡುಕಿಕೊಡಿ ಎಂದು ಕಂಪ್ಲೇಂಟು ಕೊಟ್ಟಿದ್ದನ್ನೇ ನೆಪವಾಗಿಟ್ಟುಕೊಂಡು ಅವಳ ಮನೆಗೆ ಬಂದವರು ಅವಳಂಗಳದಲ್ಲಿ ಕಂಡುಬಂದ ಇನ್ನೊಂದು  ಕೋಳಿಯನ್ನೂ ಹೊತ್ತೊಯ್ಯುವ ದೃಶ್ಯಚಿತ್ರ ಇದೆಯಲ್ಲ! ಇದಕ್ಕೆ ಸ್ವತಃ ದಲಿತ ಸಮುದಾಯದವರೇ ಆದ ದೇವನೂರು ಕೂಡ ನ್ಯಾಯ ದೊರಕುವಂತೆ ಮಾಡಿಲ್ಲ ಎಂದು ವಿಮರ್ಶೆ ಹೆಣೆದೆವೆಂದುಕೊಳ್ಳಿ! ಅದಕ್ಕಿಂತ ಪರಮಮೂರ್ಖ ವಿಮರ್ಶೆ ಬೇರೊಂದು ಇರುವುದಿಲ್ಲ! ಏಕೆಂದರೆ ತೇಜಸ್ವಿ ಅವರ ಜೊತೆಜೊತೆಗೆ ಕಥೆಗಳನ್ನು ಬರೆದ ದೇವನೂರು ನಿಜ ವಾಸ್ತವಾದಿ ಲೇಖಕ. ಒಂದು ವ್ಯವಸ್ಥೆ ಅಸಹಾಯಕರ ಆಸೆ, ಕನಸುಗಳನ್ನು ಕಳ್ಳತನದಿಂದ ಕಿತ್ತುಕೊಂಡರೆ, ಇನ್ನೊಂದು ವ್ಯವಸ್ಥೆ ಸಹಾಯ ಮಾಡುವ ನೆಪದ ಮುಖವಾಡ ಹಾಕಿಕೊಂಡು ಬಂದು ಅಳಿದುಳಿದುದ್ದನ್ನು ಹೊತ್ತೊಯ್ಯುವ ನೈಜ ಚಿತ್ರಣವಿದು. ಈಗ ಅದನ್ನೆಲ್ಲಾ ಓದಿ ಬೆಳೆದು ಪರೀಕ್ಷೆಯಲ್ಲೂ ಅದನ್ನೇ ಬರೆದು ಫಸ್ಟ್ ರ್ಯಾಂಕ್ ಗಳಿಸಿ ವಿಶ್ವವಿದ್ಯಾಲಯಗಳಲ್ಲಿ ಮೇಷ್ಟರಾದೇವು ಎಂದಕೂಡಲೇ ಸುಮ್ಮಸುಮ್ಮನೆ ಏನೇನೋ ಬರೆಯುವ ಹುಸಿ ವಿಮರ್ಶೆಗಳಂತಲ್ಲ ಅವು! ನನ್ನ ವಿದ್ಯಾಗುರುಗಳಲ್ಲಿ ಓರ್ವರಾಗಿದ್ದ  ಡಾ.ರಂಗರಾಜ ವನದುರ್ಗ ಅವರು ನಮಗೆ ಎಂ.. ಪದವಿಯಲ್ಲಿ ಪಾಠಮಾಡುವಾಗಕಾರಂತರ ಚೋಮನಿಗೆ ಭೂಮಿ ಇನ್ನೂ ಸಿಕ್ಕಿಲ್ಲ! ತೇಜಸ್ವಿ ಅವರ ತಬರನಿಗೆ ನ್ಯಾಯ ಇನ್ನೂ ದೊರೆತಿಲ್ಲ! ದೇವನೂರರ ಸಾಕವ್ವನಿಗೆ ಕೋಳಿ ಇನ್ನೂ ದಕ್ಕಲಿಲ್ಲ!” ಎಂದು ಹೇಳುತ್ತಿದ್ದರು.  ಅದೇ ಸತ್ಯ ದರ್ಶನ! ಅದಕ್ಕೆ ಇಂಥ ಕಥೆಗಳನ್ನು ಬರೆದ ಕಥೆಗಾರರು ಕಾರಣರಲ್ಲ; ಅಂದಿನ ಕೆಟ್ಟ ವ್ಯವಸ್ಥೆ ಕಾರಣ ಆಗಿರುತ್ತದೆ! ನಮ್ಮ ವಿಮರ್ಶಕರೆನಿಸಿಕೊಳ್ಳಲು ಹೊರಟವರು ಕೂಡ (ಇದಕ್ಕಾಗೇ ಒಂಥರ ಹೋರಾಟ ಮಾಡುತ್ತಿರುವವರೂ!)ಇಂತಹ ಕಥೆಗಾರರ ನಿಜ ಸಂವೇದನೆಗಳನ್ನು ವೇದನೆಗೊಳಿಸಿ ನೋಡಬಾರದಲ್ಲವೇ?

       ಹಾಗಾದರೆ ಚೋಮ, ಸಾಕವ್ವ, ಎಂಗ್ಟ, ಬೈರ ಇವರೆಲ್ಲಾ ಯಾರು? ವಾಸ್ತವಾಗಿ ಇವರೆಲ್ಲಾ ಬದುಕಿದ್ದವರಾ? ಎಂಬ ಪ್ರಶ್ನೆಯನ್ನೇ ಕೈಗೆತ್ತಿಕೊಂಡರೆ ಇವರಲ್ಲಿ ಎಲ್ಲರೂ ಒಂದೇ ಭಾವದ ಹಲವು ಮುಖಗಳು. ಅಂದರೆ ಕಥೆಗಾರರ ಕಾಲದಲ್ಲಿ ಅವರಿಗೆ ಸಮಕಾಲೀನವಾಗಿ ಬದುಕಿರಬಹುದಾದ ಇವರನ್ನು ಸ್ಫೂರ್ತಿ ಆಗಿ ಎತ್ತಿಕೊಂಡು ಸೃಜಿಸಿದ ವಾಸ್ತವ ಪಾತ್ರಗಳು! ಕಾಲ್ಪನಿಕ ಪಾತ್ರಗಳು ಎಂದುಕೊಳ್ಳಲುಒಂದು ಕಾಲದಲ್ಲಿ ಒಬ್ಬ ರಾಜನಿದ್ದ!’ ಎಂದು ಎಲ್ಲೋ ಕೇಳಿದ/ ಓದುವ - ಓದಿದ ಜನಪದ ಕಥೆಗಳಂತಲ್ಲವಲ್ಲ! ಪಾತ್ರಗಳು ಸಮಕಾಲೀನ ವ್ಯವಸ್ಥೆ, ಸಮಸ್ಯೆ ಸವಾಲುಗಳನ್ನು ಪ್ರತಿನಿಧಿಸುವ ಲೇಖಕನ ಕಾಲಘಟ್ಟದಲ್ಲಿನ ಪ್ರತಿನಿಧಿಗಳಂತೆ! ತೇಜಸ್ವಿ ಅವರ ಕಥನದ ಎಂಗ್ಟ ನಿರೂಪಕನ ಬಳಿಬಂದುಸ್ವಾಮಿ ನೀವು ನನ್ನ ಕತೆ ಬರೆದಿರುವಿರಂತೆ!’ ಎಂದು ಮುಖಾಮುಖಿ ಆಗುವುದನ್ನೇ ತೇಜಸ್ವಿ ಮತ್ತು ಎಂಗ್ಟ ಪರಸ್ಪರ ಚಿರಪರಿಚಿತರು!' ಎಂದು ಪರಿಗಣಿಸಿ, ದೇವನೂರರ ಸಾಕವ್ವನಿಗೂ ದೇವನೂರರಿಗೂ  ಪರಸ್ಪರ ಪರಿಚಯ ಇಲ್ಲ ಎಂದುಕೊಂಡು ಅದು (ಎಂಗ್ಟ) ವಾಸ್ತವ ಪಾತ್ರ, ಇದು ಕಾಲ್ಪನಿಕ (ಸಾಕವ್ವ) ಎಂದುಕೊಂಡು ವಿಶ್ಲೇಷಣೆ ಮಾಡಲು ಬರುವುದಿಲ್ಲ. ಇಲ್ಲಿ ಎಂಗ್ಟ ಮತ್ತು ಸಾಕವ್ವ ಇಬ್ಬರಿಗೂ ಓದು ಬರುವುದಿಲ್ಲವಲ್ಲ! ಯಾರೋ ಕಥೆಯನ್ನು ಓದಿದವರು ಎಂಗ್ಟನವರನ್ನು ಗುರುತಿಡಿದುನಿನ್ನ ಕಥೆಯನ್ನು ತೇಜಸ್ವಿಯವರು ಬರೆದಿದ್ದಾರೆ!' ಎಂದಿದ್ದಾರೆ. ಆಗ ಅವರು ತೇಜಸ್ವಿ ಅವರ ಬಳಿ ಬಂದು ಕುರಿತಂತೆ ಪ್ರಶ್ನೆ ಮಾಡಿದ್ದಾರೆ. ಸಾಕವ್ವನವರನ್ನು ಹೀಗೆ ಯಾರೂ ಗುರುತಿಸಿಲ್ಲ! ಅಂತ ಕಾಣುತ್ತೆ. ಅದಕ್ಕೆ ನಮ್ಮ ಇನ್ನೋರ್ವ ಕಥೆಗಾರ ದೇವನೂರ ಮಹಾದೇವ ಅವರ ಬಳಿಗೆ ಆಕೆ ಹೋಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ! ಎಂದು ವಿವೇಚನೆ ಮಾಡಬಹುದಾ? ಆಲೋಚನೆ ಕೂಡ ಸರಿಕಾಣದು ಎನಿಸುತ್ತದೆ. ತೇಜಸ್ವಿ ಕಥನದಲ್ಲಿ ಓದುಗನ ಕುತೂಹಲ ಕೆರಳಿಸಲು ಕಥೆಯ ಪಾತ್ರವೇ ಬಂದು ನಿರೂಪಕನ ಬಳಿಬಂದು ಮಾತನಾಡಿದಂತೆ ಚಿತ್ರಣಗೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ದೇವನೂರ ಮಹಾದೇವ ಅವರ ಕಥನದ ನಿರೂಪಣೆಯ ತಂತ್ರವೇ ಬೇರೆಯದ್ದು. ಇದು ಕಥೆಗಾರನಿಂದ ಕಥೆಗಾರನಿಗೆ ಬೇರೆ ಬೇರೆ ಆಗಿರುವುದೂ ಸಹಜವೇ ಆಗಿದೆ. ಹೀಗಾಗಿ ಇಂತಹ ವಾಸ್ತವಾದಿ ಕಥೆಗಾರರನ್ನು ನಾವು ಅಭ್ಯಾಸಮಾಡುವಾಗ ಅವರ ಸೃಜನೆಯ ಕಥೆಗಳು ಕಾಲ ಸಂದರ್ಭದ ಯಥಾವತ್ ಚಿತ್ರಣಗಳಾಗಿರುತ್ತವೆ ಎಂಬುದನ್ನು ಮನಗಾಣಬೇಕಿದೆ.

      ನಿಟ್ಟಿನಿಂದ ವಿವೇಚಿಸಿದಾಗ ಮೇಲ್ವರ್ಗದವರು ತಳ ಸಮುದಾಯವರನ್ನು ಸಾಂದರ್ಭಿಕ ಸಂಭಾಷಣೆಯಲ್ಲಿ ಬಳಸುತ್ತಿದ್ದ ಬೈಗುಳಗಳನ್ನು ವಾಸ್ತವವಾಗಿ ಬಿಚ್ಚಿಡುವ ಕಥನವಾಗಿ ನೋಡುವುದಷ್ಟೇ ವಾಸ್ತವ. ಅವರು ಹಾಗೇ ಬೈಗುಳದಲ್ಲಿ ಬಳಸಿದ್ದುದನ್ನು ಮರೆಮಾಚಿ ತೇಜಸ್ವಿ ಅವರು ಬರೆದಿದ್ದರೆ? ಪ್ರಾದೇಶಿಕವಾಗಿ ಬೇರುಬಿಟ್ಟ ಇಲ್ಲಿನ ಜಾತಿ ಕೀಳರಿಮೆಯ ಅಸಮಾನತೆಯ ಮನೋಭಾವದ ಚಿತ್ರಣವನ್ನು ಭಾಷಿಕವಾಗಿ ಕಟ್ಟಿಕೊಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕಥನಕಾರನಾದ ತೇಜಸ್ವಿಯವರು ಕಥನಕಾರನಾಗಿ ವಾಸ್ತವವಾದಿ. ಇಂತಹ ವಾಸ್ತವವಾದಿ ಕಥೆಗಾರನಿಗೇ ಸ್ವಜಾತಿಯ ಅಹಂಮಿಕೆ ಇತ್ತೆಂಬ ಅರ್ಥದಲ್ಲಿ ವಿಶ್ಲೇಷಣೆಗೊಳಪಡಿಸುವುದು ಅವಾಸ್ತವಿಕವಾಗುತ್ತದೆ. ಇದನ್ನು ಇಂದಿನ ಸಾಹಿತ್ಯ ಚಿಂತಕರು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಿದೆ. ಅಂದಹಾಗೆ ಪ್ರಸ್ತುತ ರಚನೆಯಾಗುತ್ತಿರುವ ಕಥೆ ಸಿನಿಮಾಗಳಂತೆ ಆಗಿನ ಸಂದರ್ಭದಲ್ಲಿ ಜನಸಾಮಾನ್ಯರು ಹೀರೋ ಆಗುವ ವ್ಯವಸ್ಥೆಯೇ ಬಹುತೇಕ ಪ್ರದೇಶಗಳಲ್ಲಿ ಇರಲಿಲ್ಲ. ಅದಕ್ಕೆ ಆಗಿನ ಅಲ್ಲಿಯ ಸ್ಥಳೀಯ ವ್ಯವಸ್ಥೆ ಆಗುಮಾಡಿಕೊಟ್ಟಿರಲೂ ಇರಲಿಲ್ಲ ಎಂಬುವುದು. ಅದನ್ನೇ ವಾಸ್ತವವಾಗಿ ತೇಜಸ್ವಿ ಹಾಗೂ ದೇವನೂರು ಮಹಾದೇವರಂತಹ ಕಥೆಗಾರರು ಚಿತ್ರಣ ಮಾಡಿಕೊಟ್ಟಿದ್ದಾರೆನ್ನುವ ಅಭಿಪ್ರಾಯದೊಂದಿಗೆ ಈಗ ಈಗಿನ ಸಾಮಾನ್ಯರೂ ಹೀರೋ ಆಗಬಹುದಾದ ಸಾಧ್ಯತೆಗಳು ಇರುವ ಹೊತ್ತಿನಲ್ಲಿ ಸಂದರ್ಭದ ತಲೆಮಾರಿನ ಬರಹಗಾರರ ಕಥೆ, ಕಾದಂಬರಿ,  ಕಾವ್ಯ ಮುಂತಾದವು ಹೇಗಿರಬೇಕೆಂದು ಆಲೋಚಿಸುವುದು ಕೂಡ ಮುಖ್ಯವಾಗುತ್ತದೆ.

     ಹೀಗಾಗಿ ತೇಜಸ್ವಿ ಅವರು ತಮ್ಮ ಕಥೆಗಳಲ್ಲಿ ದಲಿತ ಪಾತ್ರಗಳಿಗೆ ಮಾತ್ರ ಉದ್ದೇಶಿತ ರೀತಿಯಲ್ಲಿ ಬೈಗುಳಗಳನ್ನು ಬಳಸಿ ಬರೆದಿಲ್ಲ. ಇದೇ ರೀತಿಯಲ್ಲಿ ಕೆಲವೆಡೆ ಅದೇವರ್ಗದ ಗೌಡ್ರೇ ಗೌಡ್ರಿಗೆನಿನ್ನ ಜಾತಿ ಬುದ್ಧಿ ಎಲ್ಲಿ ಬಿಡ್ತೀಯಾ?” ಎಂಬ ಸಂಭಾಷಣೆಗಳನ್ನು ಬಳಸಿದಂತೆ ಕಥನ ಪಾತ್ರಗಳು ಮುಖಾಮುಖಿ ಆಗಿವೆ. ಅಂದರೆ ಮೂಡಿಗೆರೆಯ ಜನರ ಆಡುಮಾತಿನಲ್ಲಿ, ಸಂಭಾಷಣೆ, ಬೈಗುಳದಲ್ಲಿ ಸಹಜವಾಗಿ ಬಳಕೆಯಲ್ಲಿ ಇದ್ದುದಕ್ಕೆ ಕನ್ನಡಿ ಹಿಡಿದಿದ್ದಾರೆ ಎನ್ನಬಹುದು. ಇದಕ್ಕೆ ಉದಾಹರಣೆ ಎಂಬಂತೆಚಿದಂಬರ ರಹಸ್ಯಕಾದಂಬರಿಯ ಇಂಗ್ಲಿಷ್ ಗೌಡ ಎಂಬ ಪಾತ್ರಕ್ಕೆ ಅದೇ ಸಮುದಾಯದವರು ಪರಿಸರ ಕಥೆಯ ಕರಿಯಪ್ಪನು ಎಂಗ್ಟನಿಗೆ ಬಳಸಿರುವ ಬೈಗುಳದಲ್ಲೇ ಬೈದಿರುವುದು ಕಂಡುಬರುತ್ತದೆ. ಆದ್ದರಿಂದ ಒಬ್ಬ ಲೇಖಕನ ಕುರಿತಂತೆ ಒಂದು ಗಂಭೀರ  ಅಭಿಪ್ರಾಯ ತಳೆದು ಚರ್ಚೆಗೆ ಒಳಪಡಿಸುವಾಗ ಸಮಗ್ರವಾಗಿ ನೋಡಬೇಕಾಗುತ್ತದೆ. ಆದ್ದರಿಂದ ವಿಮರ್ಶೆ ಕೆಲವು ಸಲ ದೃಷ್ಟಿಯಂತೆ ಸೃಷ್ಟಿ ಎನ್ನುವ ತತ್ವವನ್ನು ಅನುಸರಿಸುತ್ತದೆ. ಆದರೆ ದೃಷ್ಟಿ ಸೀಮಿತ ದೃಷ್ಟಿಕೋನದಿಂದ ಕೂಡಿರಬಾರದು. ವಿಶಾಲ ಮನೋಭೂಮಿಕೆಯದ್ದಾಗಿರಬೇಕಾಗುತ್ತದೆ. ಆದರೆ ಕೆಲವೊಮ್ಮೆ ತಕ್ಷಣಕ್ಕೆ ಯಾವುದೋ ಒಂದು ಕೃತಿಯನ್ನು ಇಟ್ಟುಕೊಂಡು ನೋಡುವುದರಿಂದ ಒಬ್ಬ ಸಮಾಜಮುಖಿ ಜಾತ್ಯಾತೀತ ಧೋರಣೆಯ ಜಾತಿಯೇ ಬೇಡ ಎಂದ ಲೇಖಕನ (ತೇಜಸ್ವಿಯಂತವರನ್ನ) ‘ಜಾತಿಯ ಅಹಂಮಿಕೆ' ಯವನು ಎಂದು ಅರ್ಥೈಸಿ ಕೊಂಡು ವಿಮರ್ಶೆ ಬರೆದಿದ್ದೆಯಾದರೆ ತೇಜಸ್ವಿಯಂತವರ ಪ್ರೀತಿಯ ಜೀವಾತ್ಮಕ್ಕೆ ಖಂಡಿತ ನೋವಾಗುತ್ತದೆ! ನಿಟ್ಟಿನಲ್ಲಿ ನಾನೂ ಕೂಡ ನನ್ನನ್ನು ನಾನೇ ಸ್ವವಿಮರ್ಶೆಮಾಡಿಕೊಂಡಂತೆ ಬಹುತೇಕ ತೇಜಸ್ವಿ ಅವರ ಬದುಕು, ನಡೆ ಮತ್ತು ವಿಚಾರಗಳ ಪ್ರಭಾವದಿಂದಲೇ ಸರ್ವ ಜನಾಂಗದವರೊಂದಿಗೆ ಒಂದು ಪ್ರೀತಿಯ ಸಂಬಂಧವನ್ನು ಹೊಂದಲು ಸಾಧ್ಯವಾಗಿರುವುದು. ಜಾತಿ ವಿನಾಶ ಆಗಬೇಕೆಂಬ ನಿಲುವು ಹೊಂದಿದ್ದ ತೇಜಸ್ವಿ ಅವರಿಗೆಜಾತಿ ಅಹಂಮಿಕೆಯವನು ಎಂದೆಲ್ಲ ಅರ್ಥೈಸಲು ಹೋಗುತ್ತಿರುವ ಇಂದಿನ ವಿಮರ್ಶೆಯಿಂದ ಮುಂದಿನ ದಿನಗಳಲ್ಲಿ ಕಟ್ಟಾ (ಕೆಟ್ಟ) ಜಾತಿವಾದಿಗಳುಅವನಿಗೆ ಹಂಗೆ ಆಗಬೇಕು. ನಮ್ಮ ಜಾತಿಯವನಾಗಿ ನಮ್ಮ ಜಾತಿ ಸಂಘಟನೆಯೊಳಗೆ ಬರಲಿಲ್ಲ! ಈಗ ಯಾವ ಜಾತ್ಯಾತೀತ ಧೋರಣೆಯ ಪರ ನಿಂತಿದ್ದ ಕಡೆಯಿಂದಲೇ ಅವನಿಗೆ ಸೂಕ್ತ ಬಹುಮಾನ ಸಿಗುತ್ತಿದೆ. ನೋಡ್ತಾ ಇರಿ ಮುಂದೆ ಇನ್ನೂ ಇದೆ ಅವನಿಗೆ!” ಎನ್ನುವಂತೆ ಮಾಡದಿರಲಿ ನನ್ನ ತಲೆಮಾರಿನವರ ಅವಸರದ (ಕೆಲವೊಮ್ಮೆ ಆಕ್ರೋಶದ!) ವಿಮರ್ಶೆ ಎನ್ನುವುದು ಹೊತ್ತಿನಲ್ಲಿ ಬಹಳ ಮುಖ್ಯವಾಗುತ್ತದೆ.

      ನನಗೆ ತೇಜಸ್ವಿ ತುಂಬಾ ಗೊತ್ತು, ನಾನು ಅವರ ಸಹ ಲೇಖಕ, ಅವರ ನೆಂಟ, ಅವರು ಹಂಗೆ ಹಿಂಗೆ ಎಂಬ ಕಟ್ಟುಕಥೆಗಳ ಹೇಳುವವರ ಮಾತನ್ನು ನಂಬಿ ತೇಜಸ್ವಿ ಸಾಹಿತ್ಯವನ್ನು ನೋಡುವುದೂ ಕೂಡ ತುಂಬಾ ಅಪಾಯಕಾರಿ! ಅಂತ ಕೃತಿಗಳು ಕೂಡ ತೇಜಸ್ವಿ ನಿಧನರಾದ ತರುವಾಯ ತುಂಬಾ ಪ್ರಕಟವಾಗಿವೆ. ಲಕ್ಷ್ಮೀಪತಿ ಯಂತಹ ಸಾಹಿತ್ಯ ವಿಶ್ಲೇಷಕರಿಗೆ ಬೇಸರ ತರಿಸಿ ಅವರು ತೇಜಸ್ವಿಯವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಪ್ರೇರಣೆ ಒದಗಿಸಿದ ಬೆಂಗಳೂರಿನಲ್ಲಿ ನಡೆದ ತೇಜಸ್ವಿ ಅವರ ಸಮಗ್ರ ಕೃತಿ ಸಂಪುಟ ಬಿಡುಗಡೆ, ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಒಂದಿಷ್ಟು ಆಗಿರುವುದೂ ಇದೆ! ಕಾರ್ಯಕ್ರಮವನ್ನು ಯಥಾವತ್ ಲೈವ್ ಆಗಿ ಸೆರೆಹಿಡಿದುಕೊಟ್ಟಿರುವ ಬುಕ್ಬ್ರಹ್ಮ ಯುಟ್ಯೂಬ್ ಚಾನೆಲ್ ಅವರಿಗೆ ನಾವು ಸಂದರ್ಭದಲ್ಲಿ ಥ್ಯಾಂಕ್ಸ್ ಹೇಳಲೇಬೇಕು. ಇಲ್ಲದಿದ್ದರೆ ನಮಗೆ ಕಾರ್ಯಕ್ರಮದ ವಿವರಗಳನ್ನು ನೇರವಾಗಿ ವೀಕ್ಷಣೆಮಾಡಲು ಆಗುತ್ತಲೇ ಇರಲಿಲ್ಲ. (“ಹಾ ನಾನು ಮೂಡಿಗೆರೆಯವನಲ್ವಾ?  ನಾನು ಮತ್ತು ಗೆಳೆಯರು ಮೂಡಿಗೆರೆಯ ಪದವಿ ಕಾಲೇಜಿನಲ್ಲಿ ಬುಗುರಿ ಆಟ ಆಡುತ್ತಿದ್ದಾಗ  ಅಲ್ಲೇ ಪಕ್ಕದಲ್ಲಿ ನಡೆಯುತ್ತಿದ್ದ ಶುಕ್ರವಾರದ ಸಂತೆಗೆ ತೇಜಸ್ವಿ ಬಂದವರು ತಾವೂ ನಮ್ಮೊಂದಿಗೆ ಸೇರಿ ಬುಗುರಿ ಆಟ ಆಡಿದ್ದರು!”- ಇದೊಂದು ಕಟ್ಟುಕತೆ ಅಂತ ನಾನೇ ಹೇಳಿದರೆ ಮಾತ್ರ ನಿಮಗೆ ಗೊತ್ತಾಗುತ್ತೆ! ಇಲ್ಲದಿದ್ದರೆ ತೇಜಸ್ವಿ ಹೆಸರಿನಲ್ಲಿ ನನ್ನನ್ನು ವಿಶೇಷವಾಗಿ ನೋಡ್ತೀರಿ. ತೇಜಸ್ವಿ ಸಂಪತ್ ಫ್ರೆಂಡು ಅಂತ ಇನ್ನೂ ಹತ್ತು ಜನರಿಗೆ ಹೇಳ್ತೀರಿ! (ಚಿಕ್ಕಜ್ಜನ ಫ್ರೆಂಡ್!) ಬದಲಿಗೆ ವಿಶೇಷಮತಿಯಾಗಿ ಗಮನಿಸಿಕೊಂಡಾಗ ಡಿಗ್ರಿ ಕಾಲೇಜಿನಲ್ಲಿ ಸಾಮಾನ್ಯವಾಗಿ ಹುಡುಗರು ಕ್ರಿಕೆಟ್ ಆಡ್ತಾರಲ್ವಾ!! ಇವರು ಯಾಕೆ ಬುಗುರಿ ಆಡಿದರು!? ಅದೂ ತೇಜಸ್ವಿ ಜೊತೆಗೆ! ಎಂದು ಆಲೋಚಿಸಬೇಕಾಗುತ್ತದೆ. ಅದು ಸರಿಯಾದ ಗ್ರಹಿಕೆ ತಾನೇ? ಇಂಥದೊಂದು ಎಚ್ಚರದ ವಿಚಾರಪ್ರಜ್ಞೆ ನಮ್ಮದಾಗಬೇಕಿದೆ.) ಅದರಂತೆ ಅಲ್ಲಿನ ವಿಚಾರ ಸಂಕಿರಣದಲ್ಲಿ ಮೂಡಿಬಂದ ಎಲ್ಲಾ ವಿಚಾರಗಳು, ಅಭಿಪ್ರಾಯಗಳು ಸುಳ್ಳುಪೊಳ್ಳು ಎಂದು ಷರಾ ಬರೆಯಲಾಗದು. ಅದು ಔಚಿತ್ಯವೂ ಅಲ್ಲ. ಆದರೆ ಬಹುತೇಕ ಕೆಲವು ಮಾತುಗಳು ರಸವತ್ತಾದ ವರ್ಣನೆಗಳಿಂದ ತೇಜಸ್ವಿಯವರ ಸಾಹಿತ್ಯಯಾನದ ಅಂತರಂಗವನ್ನೇ ಅರ್ಥೈಸಿಕೊಳ್ಳದಂತಿದ್ದವು ಎಂಬುದಂತು ಸತ್ಯ. ಆದ್ದರಿಂದ ಕೃತಿಯೊಂದನ್ನು ಲೇಖಕ ಕೇಂದ್ರಿತವಾಗಿ ನೋಡುವುದರಲ್ಲಿ ತಪ್ಪಿಲ್ಲ ನಿಜ; ಆದರೆ ಅದಕ್ಕೂ ಮೊದಲು ಕೃತಿಕೇಂದ್ರಿತವಾಗಿ ಅರ್ಥಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.

    ಮುಖ್ಯ ಸಮಸ್ಯೆ ಇರುವುದು ತೇಜಸ್ವಿ ಬೈಗುಳಗಳನ್ನು ಕೆಲವು ಮಾತುಗಾರರು, ಓದುಗರು ಕೇವಲ ತಮಾಷೆ ಎಂಬಂತೆ ಮಾತ್ರ ಪರಿಭಾವಿಸಿರುವುದು. ಪ್ರಧಾನವಾಗಿ ಹಾಸ್ಯವನ್ನೇ ಮುಖ್ಯಸ್ಥಾಯಿಯಾಗಿ ಹೊಂದಿ ಸಭಿಕರನ್ನು ಸೆಳೆಯುವ ಗಂಗಾವತಿ ಪ್ರಾಣೇಶ ಅವರ ಭಾಷಣದ ಥರ ಅಂತ. ತೇಜಸ್ವಿಯವರ ಕಥನ ಸಾಹಿತ್ಯದಲ್ಲಿ ಅದು ಕೇವಲ ತಮಾಷೆಗಾಗಿ ಬಂದಿಲ್ಲ ಎಂಬುವುದು ನನ್ನ ಅನಿಸಿಕೆ. ನಮ್ಮ ಮೂಡಿಗೆರೆಯಲ್ಲಿ ಹಳ್ಳಿಜನ ತಾವು ಪರಸ್ಪರ ಬೈದಾಡುವಾಗ ಜಾತಿ, ಅಂತಸ್ತಿನ ಬೇಧಭಾವ ಇಲ್ಲದೆ ಹೆಂಗಸರೂ ಕೂಡ ಗಂಡಸರಿಗೆ ಹೀಗೆ ಬೈಯುವುದನ್ನು ನಾನು ಗಮನಿಸಿದ್ದೇನೆ. ಇಂತಹ ಸಹಜ ಸಂಭಾಷಣೆಯನ್ನು ಒಬ್ಬ ಕಥೆಗಾರ ಹೇಗೆ ತನ್ನ ಕಥನದಲ್ಲಿ ನಿರ್ವಹಣೆ ಮಾಡಬೇಕು? ಎಂಬುವುದು ಮುಖ್ಯ ಪ್ರಶ್ನೆ. ತೇಜಸ್ವಿ ಅದನ್ನು ತಮ್ಮ ಕಥನ ಪ್ರಕಾರದಲ್ಲಿ ಯಥಾವತ್ತಾಗಿ ತಂದಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಆದ್ದರಿಂದ ಯಾವುದೇ ಒಂದು ಜನಾಂಗವನ್ನು ಕುರಿತೇ ಅವರು ಹಾಗೇ ಉದ್ದೇಶ ಪೂರ್ವಕವಾಗಿ ಬರೆದಿದ್ದಾರೆ ಎನ್ನುವುದು ಸರಿಯಲ್ಲ ಎನಿಸುತ್ತದೆ. ಜೊತೆಗೆ ಇಂತಹ ಬೈಗುಳಗಳನ್ನು ನಾಗರೀಕ ಸಮಾಜ ಸ್ವೀಕರಿಸುವುದಿಲ್ಲ ಕೂಡ. ಈಗ ಹಾಗೆ ಯಾರಾದರೂ ಬೈದರೆ ಕಂಪ್ಲೇಂಟ್ ಕೂಡ ಕೊಡಬಹುದು. ನಮಗೇ ಯಾರಾದರೂ ಅಂತಹ ಪದ ಪ್ರಯೋಗ ಮಾಡಿದಾಗ ನಾವು ಬೈಸಿಕೊಂಡು ಓಕೆ ಓಕೆ ಅಂತ ಬಂದಿರುವುದಿಲ್ಲ. ನಾವೂ ಏನಾದರೂ ಅದೇ ರೀತಿಯಲ್ಲಿ ಬೈಯದಿದ್ದರೂ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟೇ ಕೊಟ್ಟಿರುತ್ತೇವೆ. ಹಾಗಾಗಿ ಇಲ್ಲಿ ಕಥೆಗಾರನಾಗಿ ತೇಜಸ್ವಿ ಸಾಮಾಜಿಕವಾಗಿ ಸಂಭಾಷಣೆ ರೂಪದಲ್ಲಿ ಇರುವ ಪ್ರಾದೇಶಿಕ ಭಾಷೆಯಲ್ಲಿ ಯಥಾವತ್ತಾಗಿ ತಂದಿರುವುದು ಅವರ ಕಥನ ಸಾಹಿತ್ಯದಲ್ಲಿ ಕಾಣುತ್ತಿದೆ. ಆದ್ದರಿಂದ ಇಲ್ಲಿನ ಯಾವ ಜಾತಿಯ ಪಾತ್ರವು ಯಾವ ಜಾತಿಯ ಪಾತ್ರಕ್ಕೆ ಥರದ ಸಂಭಾಷಣೆ ಮಾಡಿದೆ ಎಂಬುವುದನ್ನು ವಿಮರ್ಶಕ ನೋಡಬೇಕೇ ವಿನಾ ಲೇಖಕನ ಜಾತಿಯಿಂದಲ್ಲ ಎಂಬುದು ಮುಖ್ಯವಾಗುತ್ತದೆ. ಉದಾಹರಣೆಗೆ ಲಕ್ಷ್ಮೀಪತಿ ಅವರೇ ತಮ್ಮ ಲೇಖನದಲ್ಲಿ ಉಲ್ಲೇಖಿಸಿ ಬರೆದಿರುವ ಕರಿಯಪ್ಪ ಮತ್ತು ಎಂಗ್ಟನಲ್ಲಿ. ಹಾಗೇ ಪದ ಪ್ರಯೋಗ ಮಾಡಿರುವವ ಕರಿಯಪ್ಪ. ಹಾಗಾದರೆ ಇಲ್ಲಿ ಕರಿಯಪ್ಪನ ಮನೋಸ್ಥಿತಿ ಎಂಗ್ಟನ ವಿಚಾರದಲ್ಲಿ ಹೇಗಿತ್ತೆಂಬುವುದನ್ನು ನೋಡಬೇಕೇ ವಿನಾ ಅದೂ ಕಥನಕಾರನದ್ದೂ ಆಗಿತ್ತು ಎನ್ನುವುದು ಸರಿಯಲ್ಲ ಎನಿಸುತ್ತದೆ. ಇದು ತೇಜಸ್ವಿ ಅವರು ಬರೆದ ಕಾಲಕ್ಕೆ ಅನ್ವಯಿಸಿ ನಾವೀಗ ಅದನ್ನು ಹೀಗೆ ನೋಡಬೇಕಿದೆ ಎನ್ನುವುದೇ ದಿಟವಾದ. ಇದು ಮೂಡಿಗೆರೆ ಹಾಗೂ  ಸುತ್ತಮುತ್ತಲಿನ ಸ್ಥಳೀಯ ಓದುಗರಿಗೆ ಈಗಾಗಲೇ ಮನವರಿಕೆ ಆಗಿದೆ. ಆದರೆ ಪ್ರಾದೇಶಿಕವಾಗಿ ದೂರ ಇರುವವರಿಗೆ ಇದನ್ನು ಇದೇ ಭಾವದಲ್ಲಿ ಅರ್ಥೈಸಬೇಕಿದ್ದ ಕೆಲವು ಭಾಷಣಕಾರರು ಹಾಗೂ ಬರಹಗಾರರು ಕೇವಲ ಇದನ್ನು ತಮಾಷೆ ಆಗಿಯೋ ಅಥವಾ ಅನ್ನಿಸಿದ ಇಸಂಗಳನ್ನೆಲ್ಲ ತಂದು ಅನ್ವಯ ಮಾಡುತ್ತಿರುವುದರಿಂದಲೋ ಬೇರೊಂದು ರೀತಿಯ ಬಣ್ಣಪಡೆದುಕೊಳ್ಳುತ್ತಿದೆ! ಇದೇ ಹೊತ್ತಿನ ವಿಪರ್ಯಾಸ!

    ಆದರೆ ಲಕ್ಷ್ಮೀಪತಿಯವರ ಲೇಖನ ಓದಿದ ಮೇಲೆ ನನಗೆ ಇನ್ನೊಂದು ನಿಟ್ಟಿನಿಂದ ಅನಿಸಿರುವುದು ಏನೆಂದರೆ ಪ್ರಸ್ತುತ ಕಥೆ, ಕವನವನ್ನು ಬರೆಯುವರು ಜಾತಿ, ಲಿಂಗ ಬೇಧ ಹೋಗಲಿ ಬೇಧ ಇಲ್ಲದಿದ್ದರೂ ಭಾವನಾತ್ಮಕವಾಗಿ ನೋವನ್ನುಂಟು ಮಾಡುವ ಇಂತಹ ಬೈಗುಳಗಳನ್ನು ಇನ್ನು ಮುಂದೆ ಬಳಸಬಾರದು ಎಂಬುವುದಕ್ಕೆ ಅರಿವು ಮೂಡಿಸುತ್ತದೆ. ಅದು ಮೇಲುವರ್ಗದ ಅಥವಾ  ಕೆಳವರ್ಗದ ಸಮುದಾಯದಿಂದ ಬಂದ ಯಾವುದೇ ಬರಹಗಾರನಾಗಲಿ. ಅದರಂತೆ ನವನಾಗರೀಕರು, ವಿದ್ಯಾವಂತರೆನಿಸಿಕೊಂಡವರು ಸಹ ಯಾವುದೇ ಸಂದರ್ಭದಲ್ಲೂ ಅವಮಾನಿಯ ಬೈಗುಳಗಳನ್ನು ಬೈದಾಡಬಾರದು. ಹಾಗಾದಾಗ ಮಾತ್ರ ಅವು ಕಥೆ ಕವಿತೆಗಳಲ್ಲೂ ನುಸುಳಲಾರವು. (ನಾವಿಲ್ಲಿ ಕೇವಲ ಕಥೆ ಮತ್ತು ಕಥೆಗಾರನನ್ನು ಮಾತ್ರ ಉದಾಹರಣೆಯಾಗಿಟ್ಟುಕೊಂಡು ಮಾತನಾಡುತ್ತಿದ್ದೇವೆಯಷ್ಟೇ. ಆದರೆ ಯಾವುದಾದರೂ ಒಬ್ಬ ವ್ಯಕ್ತಿ ತನಗಾದ ನಿಂದನೆ ಅಥವಾ ಬೈಗುಳ, ಬೆದರಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಂಪ್ಲೇಂಟ್ ಬರೆಯುವಾಗ ನನ್ನನ್ನು ಕೆಲವು ಅವಾಚ್ಯ ಶಬ್ದಗಳಿಂದ ಅವನು ಬೈದನೆಂದಷ್ಟೇ ಬರೆಯಲಾಗದು. ಅವನು ಬೈದಿದ್ದನ್ನು ಯಥಾವತ್ ಬರೆದುಕೊಡಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ನಿಂದಕ ಅಥವಾ ಬೆದರಿಕೆ ಹಾಕಿದವನನ್ನು ಕಾನೂನಿನ ಯಾವ ಸೆಕ್ಷನ್ ಅಡಿಯಲ್ಲಿ ಬಂಧಿಸಬೇಕು ಮತ್ತು ನಿಟ್ಟಿನಲ್ಲಿ ಕೇಸು ದಾಖಲಿಸಿ ಕೋರ್ಟಿಗೆ ಕಳುಹಿಸಿಕೊಡಬೇಕು ಎಂಬುವುದೂ ಇಲ್ಲಿ ಕಾನೂನು ಪಾಲಕರಿಗೆ ಸಾಧ್ಯವಾಗುವುದಿಲ್ಲ ಎಂಬುವುದನ್ನೂ ನಾವಿಲ್ಲಿ ಆಲೋಚನಾರ್ಹವಾಗಿ ವಿವೇಚಿಸಬೇಕಿದೆ. ನಿಟ್ಟಿನಿಂದಲೂ ಒಬ್ಬ ವಾಸ್ತವವಾದಿ ಕಥೆಗಾರ ತನ್ನ ಕಥೆಗೆ ಇಂತಹ ಪ್ರಕರಣಗಳನ್ನು ಆಗುಮಾಡಿಕೊಂಡು ನಿರೂಪಿಸುವ ಸಂದರ್ಭ ಬಂದಾಗ ಅದನ್ನು ಹೇಗೆ ನಿರ್ವಹಿಸಬೇಕೆಂಬುವುದು ಕೂಡ ಇಲ್ಲಿ ಚಿಂತನಾರ್ಹವಾಗುತ್ತದೆ.) ಆದ್ದರಿಂದ ಲಕ್ಷ್ಮೀಪತಿಯವರು ಬರೆದಿರುವತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿಲೇಖನವನ್ನು ಉದಾಹರಣೆಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ತೇಜಸ್ವಿ ಅವರಿಗೆ ಸ್ವಜಾತಿಯ ಅಹಂಮಿಕೆ ಇತ್ತೆಂದು ವ್ಯಾಖ್ಯಾನ ಮಾಡಿದ್ದೇಯಾದರೆ ತಪ್ಪಾಗುವುದಿಲ್ಲವೇ? ಏಕೆಂದರೆ ತೇಜಸ್ವಿಯವರು ಅಂತರ್ಜಾತೀಯ ವಿವಾಹ ಆದವರು. ಜಾತಿ ವ್ಯವಸ್ಥೆಯ ವಿರುದ್ಧ ಜೀವನ ಪರ್ಯಂತ ವಿರೋಧ ವ್ಯಕ್ತಪಡಿಸುತ್ತಲೇ ಬಂದವರು. ಜಾತಿಯೇ ಬೇಡ ಎಂದ ಕಥೆಗಾರನನ್ನು ಇಲ್ಲ ನೀನು ಅದೇ ಜಾತಿಯವನು, ನೀನು ಅದಕ್ಕೆ ಹಾಗೇ, ಅಲ್ಲೇ ಇರು! ಅಂತ ಜಾತ್ಯಾತೀತ ಕ್ಷೇತ್ರದಲ್ಲಿ ಇರುವವರೇ ಹೇಳಿದರೆ ಹೇಗೆ? ಅದು ಬೇರೆ ಜಾತಿವಾದಿ ಲೇಖಕರಿಗೆ ಹೇಳಿದ್ದರೆ ಒಪ್ಪಬಹುದಿತ್ತು. ತೇಜಸ್ವಿ ವಿಚಾರದಲ್ಲಿ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಗಮನಿಸಿಕೊಂಡ ಹಾಗೆ ಈಗ ಕೆಳಜಾತಿಯವರು ಕೂಡ ತಮ್ಮ ಜಾತಿ ಹೆಸರಿನಲ್ಲಿ ಸಂಘಗಳನ್ನು ಮಾಡಿಕೊಂಡಿರುವುದನ್ನು ಗಮನಿಸಿಕೊಂಡಾಗ ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯ ಪಡೆಯಲು ಇದೇ ಅತ್ಯಗತ್ಯವೇ? ಜೊತೆಗೆ ಉನ್ನತ ಜಾತಿಗಳಿಗೆ ಜಾತಿಸಂಘಗಳು ಪ್ರಸ್ತುತ ಅಗತ್ಯ ಇದೆಯೇ? ಎಂಬುವುದನ್ನೂ ಯೋಚಿಸಬೇಕಿದೆ. ಇದರಲ್ಲಿ ಬೇಕು - ಬೇಡಗಳ ಅಭಿಪ್ರಾಯ ಬೇರೆಬೇರೆ. ಇದರಿಂದ ಜಾತಿ ವಿನಾಶವಾಗಿ ಅಂತರ್ಜಾತಿಗಳು ಒಂದಾಗಿ ಕಾಲಾಂತರದಲ್ಲಿ ಜಾತಿ ಎಂದರೆ ಮನುಷ್ಯ ಜಾತಿಯವರೆಲ್ಲ ಒಂದೇ ಎಂಬ ವಾತಾವರಣ ನಿರ್ಮಾಣವಾಗಬೇಕೆಂದು ಕನಸುಕಂಡಿದ್ದ ತೇಜಸ್ವಿಯಂತಹ ಚಿಂತಕರ ಆಶಯ ಭವಿಷ್ಯತ್ತಿನಲ್ಲಿ ಈಡೇರಿತೆ? ಎಂಬುದನ್ನು ಅಲೋಚನೆ ಮಾಡಬೇಕಿದೆ.

   ನಿಟ್ಟಿನಲ್ಲಿ ಗಮನಿಸಿಕೊಂಡಂತೆ ತೇಜಸ್ವಿಯವರನ್ನು ಪತ್ರಿಕಾ ಅಂಕಣಕಾರ ಬಿ.ಚಂದ್ರೇಗೌಡ ಅವರು ಲಂಕೇಶ್ ಪತ್ರಿಕೆಗಾಗಿ ಮಾಡಿದ ಸಂದರ್ಶನವು ಜಾತಿ ವ್ಯವಸ್ಥೆಯನ್ನು ಕುರಿತಂತೆ ತೇಜಸ್ವಿಯವರ ಚಿಂತನೆಯು ಏನಾಗಿತ್ತು ಎಂಬುವುದಕ್ಕೆ ಒಂದು ಉತ್ತಮ ನಿದರ್ಶನ. ಇದು ಲಿಖಿತರೂಪದಲ್ಲಿ ತೇಜಸ್ವಿಯವರು ಬರೆದುಕೊಟ್ಟಿದ್ದ ಪ್ರತಿಯಾಗಿದ್ದು ತೇಜಸ್ವಿಯವರವಿಮರ್ಶೆಯ ವಿಮರ್ಶೆಕೃತಿಯಲ್ಲಿ ಪ್ರಕಟವಾಗಿದೆ. ಚಂದ್ರೇಗೌಡರ ಪ್ರಶ್ನೆ ಎಂದರೆ೧೯೮೮ರ ಅಕ್ಟೋಬರ್ನಲ್ಲಿ ಶೃಂಗೇರಿಯಲ್ಲಿ ಅಂತರ್ಜಾತಿ ವಿವಾಹಿತರ ಸಮ್ಮೇಳನ ನಿಮ್ಮ ಅಧ್ಯಕ್ಷತೆಯಲ್ಲಿ ನಡೆದು ಕೆಲವು ನಿರ್ಣಯ ತಗೊಂಡೋ. ಬಗ್ಗೆ ಡಾ.ಸಿದ್ದಲಿಂಗಯ್ಯ ಬಿಟ್ರೆ ಇನ್ಯಾರೂ ಗಮನ ಕೊಡಲಿಲ್ಲ. ಈಚೆಗೆ ಮದುವೆಗಳಿಂದ ಸೃಷ್ಟಿಯಾಗೊ ಜನಗಳ ಬಗ್ಗೆ ಏನು ಮಾಡೋದು ಸಾರ್?” ಅದಕ್ಕೆ ತೇಜಸ್ವಿ ಉತ್ತರ ಮುಂದಿನಂತಿದೆ. ಅದೆಂದರೆಜಾತ್ಯಾತೀತರು ಎಂದು ಒಂದು ಪಂಗಡ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಶೇಕಡಾ ಒಂದರಷ್ಟು ಮೀಸಲಾತಿಯನ್ನು ಕೋಡಬೇಕೆಂದು ಸಿದ್ದಲಿಂಗಯ್ಯ ಒಬ್ಬರೇ ದನಿಯೆತ್ತಿದ್ದು. ಎಲ್ಲಾ ತಮ್ಮತಮ್ಮ ಜಾತಿ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಿದ್ದಲಿಂಗಯ್ಯನಂಥವರು ಒಬ್ಬರಾದರೂ ಅವನ್ನು ಮೀರಿದರಲ್ಲ ಎಂದು ಸಂತೋಷವಾಗುತ್ತೆ. ಆದರೆ ಇದು ಅಂತರ್ಜಾತಿಯ ವಿವಾಹ ಆದವರೆಲ್ಲಾ ಸಂಘಟಿತರಾಗಿ ಪ್ರಯತ್ನಿಸದಿದ್ದರೆ ಆಗುವುದಿಲ್ಲ. ರಾಜಕಾರಣಿಗಳು ಎಂದೆಂದೂ ಭಾರತವನ್ನು ಜಾತ್ಯಾತೀತ ಸಮಾಜ ಆಗದಹಾಗೆ ನೋಡಿಕೊಳ್ಳುತ್ತಾರೆ. ಏಕೆಂದರೆ ಇವ್ಯಾವ ಅರ್ಹತೆಗಳೂ ಇಲ್ಲದ ಅವರಿಗೆ ಜಾತಿ ಬಿಟ್ಟರೆ ಓಟಿಗೆ ಬೇರೆ ಗತಿಯೇ ಇಲ್ಲ. ನಮ್ಮ ರಾಜಕಾರಣದ ಮಹಾ ದುರಂತ ನೋಡು! ಯಾವ ಸಂಘಟನೆಯನ್ನು ಸಮಸ್ಯೆ ಪರಿಹರಿಸಲಿಕ್ಕೆ ಎಂದು ನಾವು ಸೃಷ್ಟಿ ಮಾಡುತ್ತೇವೋ ಅದೇ ತಮ್ಮ ಅಸ್ತಿತ್ವಕ್ಕಾಗಿ ಸಮಸ್ಯೆ ಸೃಷ್ಟಿ ಮಾಡುತ್ತಾ ಅವನ್ನು ಉಲ್ಬಣಗೊಳಿಸುತ್ತಾ ನಾವು ರಾಜಕಾರಣ ಮಾಡುತ್ತಿದ್ದೇವೆ. ಜಾತಿ ಸಮಸ್ಯೆಯನ್ನು ಅಖೈರಾಗಿ ರಾಜಕಾರಣಿಗಳು ಬಗೆಹರಿಸುತ್ತಾರೆನ್ನುವುದು ಸುಳ್ಳು. ಮೀಸಲಾತಿ ದೆಸೆಯಿಂದ ಎಷ್ಟೆಷ್ಟೋ ಹೊಸಹೊಸ ಜಾತಿಗಳು ಹುಟ್ಟಿಕೊಂಡು ಈಗಾಗಲೇ ನಾವು ಹಿಂದುಳಿದವರು ಎಂದು ಪೈಪೋಟಿ ನಡೆಸುತ್ತಿಲ್ಲವೆ! ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿದ್ದು ನಮ್ಮ ಒಳಗೋ ಅಥವಾ ಹೊರಗೋ ಎನ್ನುವ ಅನುಮಾನ ಈಗ ನನಗೆ ಶುರುವಾಗಿದೆ. ಎಲ್ಲೋ ನಾವು ತಪ್ಪಿದ್ದೇವೆಯೆ ಎಂದು ಹುಡುಕಬೇಕಾಗಿದೆ. (ವಿಮರ್ಶೆಯ ವಿಮರ್ಶೆ - ಪುಟ:೧೬೦)”  ತೇಜಸ್ವಿಯವರ ಅಭಿಪ್ರಾಯವು ವಾಸ್ತವಿಕತೆಯ ಅನಾವರಣವೇ ಆಗಿದೆ. ತೇಜಸ್ವಿಯವರ ಅಭಿಪ್ರಾಯವನ್ನೇ ನಾವು ತೆಗೆದುಕೊಂಡಾಗ ರಾಜಕಾರಣಿಗಳು ಭಾರತವನ್ನು ಜಾತ್ಯಾತೀತ ಸಮಾಜ ಆಗದ ಹಾಗೇ ನೋಡಿಕೊಳ್ಳುತ್ತಿದ್ದಾರೆಂಬುವುದು ಓಟಿಗಾಗಿ. ಆದರೆ ನಾವು ಬರಹಗಾರರೂ ಕೂಡ ಜಾತಿಯೇ ಬೇಡ ಎಂದ ಅಂತರ್ಜಾತಿಯ ಭಾವ ಸಂಬಂಧದ ಲೇಖಕನನ್ನು ಮತ್ತದೇ ಜಾತಿಯೊಳಗಿಟ್ಟು ವಿಶ್ಲೇಷಣೆ ಮಾಡುವುದೂ ಒಂಥರ ಸಾಹಿತ್ಯಕ ಜಾತಿರಾಜಕಾರಣವೇ ಎನಿಸಿಬಿಡುತ್ತದೆಯಲ್ಲವೇ? ಖಂಡಿತ ಹಾಗಾಗಬಾರದು.

   ತೇಜಸ್ವಿಯವರು ಸಾಮಾಜಿಕ ಪರಿಸರವನ್ನು ಹೇಗೆ ಗ್ರಹಿಕೆಗೆ ತಂದುಕೊಳ್ಳುತ್ತಿದ್ದರು ಎಂಬುದಕ್ಕೆ ಅವರ ಬಹುಕಾಲದ ಗೆಳೆಯ, ವಿಚಾರವಾದಿ ಮೇಷ್ಟ್ರು ಎಂದೆಲ್ಲಾ ಒಂದುಕಾಲಘಟ್ಟದಲ್ಲಿ ಹೆಸರುವಾಸಿಯಾಗಿದ್ದ ಕೆ.ರಾಮದಾಸ್ ಅವರ ಅಭಿಪ್ರಾಯದಲ್ಲಿ ನೋಡುವುದಾದರೆಮೀನು ಹಿಡಿಯಹೋದಾಗ ಒಂದು ಹಳ್ಳಿಯಲ್ಲಿ ಹೆಂಗಸರುಗಳನ್ನು ನಾವು ಗಮನಿಸುತ್ತಿದ್ದೆವು. ಎಷ್ಟು ದಿಟ್ಟತನದಿಂದ ಯಾವುದೇ ಸಂಕೋಚವೂ ಇಲ್ಲದೆ ಅಶ್ಲೀಲ, ಶಿಷ್ಟ ಅನ್ನುವ ಪರಿಕಲ್ಪನೆಯೇ ಇಲ್ಲದೆ ಮುಗ್ಧವಾಗಿ ಮಾತನಾಡುತ್ತಿದ್ದರು. ಅನುಭವ ಕಿರಗೂರಿನ ಗಯ್ಯಾಳಿಗಳಲ್ಲಿ ಚಿತ್ರಿತವಾಗಿದೆ. ಅಲ್ಲಿ ಬರುತ್ತಲ್ಲ ಮರಬಿದ್ದು ಆರಂಭವಾದ ವಿದ್ಯಾಮಾನಗಳು, ಊರಿನ ಗಂಡಸರ, ಅವರ ನಪುಂಸಕತೆಗಳನ್ನು ಚಿತ್ರಿಸುತ್ತಾ ಎಂಥ ಜಟಿಲವಾದ ಒಂದು ಸಾಮಾಜಿಕ ಸ್ಥಿತಿಯನ್ನು ಚಿತ್ರಿಸುತ್ತಾರೆ. (ತೇಜಸ್ವಿ - ಸಾಹಿತ್ಯ ಕೃಷಿ; ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಚಾರ ಸಂಕಿರಣ ಮಾಲೆ, ೨೦೦೪)” ಎಂದುಕಾಲದ ಕಾಲು ಸದ್ದು ಆಲಿಸಬಲ್ಲ ಲೇಖಕ ತೇಜಸ್ವಿಲೇಖನದಲ್ಲಿ ಅವರು ಹೇಳಿದ್ದಾರೆ. ಎಂದರೆ ತೇಜಸ್ವಿಯವರ ಬರಹ ಸಾಮಾಜಿಕ ಜಗತ್ತನ್ನು ಹೇಗೆ ವೀಕ್ಷಣೆ ಮಾಡುತಿತ್ತು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

   ಈಗ ಲಕ್ಷ್ಮೀಪತಿಯವರುತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿಎಂಬ ತಮ್ಮ ಲೇಖನದಲ್ಲಿ ಮತ್ತೊಂದು ಆಯಾಮವಾಗಿ ವಿವರಿಸಿರುವಂತೆ ಮೇಲುಸ್ತರದ ಒಕ್ಕಲಿಗ ಜನಾಂಗದವರಾದುದರಿಂದಲೇ ತೇಜಸ್ವಿಯವರು ಪರಿಸರದ ಕಥೆಯಲ್ಲಿ ಮಾಸ್ತಿ ಮತ್ತು ಬೈರನಂತಹ ತಳಸಮುದಾಯದ ಪಾತ್ರಗಳನ್ನು ದೈಹಿಕವಾಗಿಯೂ ತನ್ನ ಕಣ್ಣೋಟದಲ್ಲಿ ಉಢಾಪೆಯ ಶೈಲಿಯಲ್ಲಿ ನಿರೂಪಿಸಿದ್ದಾರೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಅದರಂತೆ ಅವರ ತಲೆಗೂದಲು, ಕೈಕಾಲು ಮುಂತಾದವನ್ನು ವರ್ಣನೆಮಾಡಿ ಮೇಲುವರ್ಗದ ದೃಷ್ಟಿಯಿಂದ ಆದಿವಾಸಿ ಸಮುದಾಯವನ್ನು ಕೀಳಾಗಿ ಮನರಂಜನೆಯ ವಸ್ತುವಾಗಿ ನೋಡಿರುವುದಾಗಿ ವಿಷಾದವ್ಯಕ್ತಪಡಿಸಿದ್ದಾರೆ. ಆದರಿಲ್ಲಿ ಗಮನಿಸಿದಂತೆ ತೇಜಸ್ವಿಯವರು ಕೇಳವರ್ಗದ ಪಾತ್ರಗಳಿಗೆಂದೇ ಇಂತಹ ನಿರೂಪಣೆ ಮಾಡಿಲ್ಲ ಎನಿಸುತ್ತದೆ. ಲಕ್ಷ್ಮೀಪತಿಯವರೇ ತನ್ನ ಲೇಖನದಲ್ಲಿ ವಿಶೇಷವಾಗಿ ಮೇಲುಸ್ತರದವನೆಂದು ಗುರುತಿಡಿದು ತೋರಿಸಿರುವ ಕರಿಯಪ್ಪನನ್ನು ಕುರಿತೂಕರ್ವಾಲೋಕಾದಂಬರಿಯಲ್ಲಿ ತೇಜಸ್ವಿಯವರು ನಿಷ್ಪಕ್ಷಪಾತವಾಗಿಯೇ ವರ್ಣಿಸಿರುವುದು ಕಂಡುಬರುತ್ತದೆ. ಅದರ ಪ್ರಕಾರಕರ್ ಗೆ  ಕುಳ್ಳಗಿದ್ದ ಈತ ತನಗೆ ಮರ ಹತ್ತುವುದು, ಶಿಕಾರಿ ಮಾಡುವುದು, ಈಜುವುದು, ಹಕ್ಕಿ ಹಿಡಿಯುವುದು ಇತ್ಯಾದಿ ಸಕಲವೂ ಬರುತ್ತದೆ ಎಂದು ಹೇಳಿದ.”(ಕರ್ವಾಲೋ; ಪುಟ:೧೦೬), ಇನ್ನೊಂದು ಚಿತ್ರನಮ್ಮ ಅನ್ವೇಷಣೆಗೂ ಬಿರ್ಯಾನಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಬಿರ್ಯಾನಿ ಕರಿಯಪ್ಪ ನಮ್ಮೊಡನೆ ಬರಲು ನಮ್ಮ ಅಭ್ಯಂತರವೇನೂ ಇಲ್ಲವೆಂದು ಕರ್ವಾಲೋರಿಗೆ ಸ್ಪಷ್ಟಪಡಿಸಿದೆವು. ಕರಿಯಪ್ಪನ ಎರಡು ಕಾಲುಗಳೂ ಬಾಳೆಕಾಯಿಯಂತೆ ಕಮಾನಾಗಿ ಬಾಗಿದ್ದುವು.”(ಕರ್ವಾಲೋ; ಪುಟ: ೧೦೭) ಇಲ್ಲಿ ಕರ್ ಗೆ, ಕುಳ್ಳಗೆ, ಬಾಳೆಕಾಯಿಯಂತೆ ಬಾಗಿದ ಕಾಲುಗಳ ನಿರೂಪಣೆಯಲ್ಲಿ ನಿರೂಪಕನಾಗಿರುವ ಕಥೆಗಾರ ಜಾತಿ ತಾರತಮ್ಯ ಮಾಡಿ ವರ್ಣಿಸುದಾಗಿದ್ದರೆ ಕರಿಯಪ್ಪನನ್ನು ಬೇರೊಂದು ವಿಶೇಷ ಸೌಂದರ್ಯದಲ್ಲಿ ಸುಳ್ಳಾಗಿ ವರ್ಣಿಸಿ ಸಂತೃಪ್ತನಾಗಿರುತ್ತಿದ್ದ. ತೇಜಸ್ವಿಯವರು ಹಾಗಲ್ಲವಲ್ಲ. ಅವರು ರಾಮ ಮನೋಹರ ಲೋಹಿಯಾ ಅವರಬ್ಲಾಕ್ ಈಸ್ ಬ್ಯುಟಿಪರಿಕಲ್ಪನೆಗೆ ಬದ್ಧರಾದವರಂತೆ ಕಂಡುಬರುತ್ತಾರೆ. ಆದ್ದರಿಂದ ಕಪ್ಪು, ಕುಬ್ಜತೆ, ಅಂಕುಡೊಂಕುಗಳನ್ನು ಕೂಡ ಕೇವಲವಾಗಿ ಕಂಡಿದ್ದಾರೆಂಬುವುದಕ್ಕಿಂತಲೂ ಅದನ್ನು ಲೋಹಿಯವರದ್ದೇ ಲೇಖನವಾದಸೌಂದರ್ಯ ಮತ್ತು ಮೈಬಣ್ಣಕಾನ್ಸೆಪ್ಟ್ನಲ್ಲಿ ಕಂಡುಕೊಂಡಿದ್ದಾರೆನ್ನಬಹುದಾಗಿದೆ. ಲೋಹಿಯಾ ಅವರೇ ವಿವರಿಸಿರುವಂತೆ ಬಿಳಿ, ಎತ್ತರವಾದ ಮೈಕಟ್ಟು, ನೀಳಕೂದಲು ಇತ್ಯಾದಿ ನಾಗರೀಕ ಜಗತ್ತು ಗುರುತಿಸಿಕೊಂಡಿರುವAತದ್ದು ಮಾತ್ರ ಸೌಂದರ್ಯವಲ್ಲ; ಒಂದೊAದು ಜನಾಂಗಕ್ಕೂ, ವ್ಯಕ್ತಿಗೂ ವಿಶೇಷ ಲಕ್ಷಣದ ಸೌಂದರ್ಯದ ಲಕ್ಷಣದ ಸೌಂದರ್ಯ ಇರುತ್ತದೆ. ಅದನ್ನು ಇದ್ದಂತೆ ನೋಡಿ ಅದರಂತೆ ಒಪ್ಪಿಕೊಳ್ಳುವುದು ಮುಖ್ಯ ಎನ್ನುವ ಭಾವಾರ್ಥದಲ್ಲಿ ತೇಜಸ್ವಿಯವರು ತಮ್ಮ ಕಥನದ ಪಾತ್ರಗಳನ್ನು ವರ್ಣಿಸಿರುವುದನ್ನು ಸಮಾಜಶಾಸ್ತ್ರದ ಹಿನ್ನೆಲೆಯಲ್ಲೇ ನಮಗೆ ಗ್ರಹಿಕೆಗೆ ತಂದುಕೊಳ್ಳಲು ಅವಕಾಶವಿದೆ. ಹಾಗೇ ಗಮನಿಸಿಕೊಂಡಂತೆ ಕರಿಯಪ್ಪನೂ ಒಕ್ಕಲಿಗ ಜಾತಿಯವನೆಂದುಕೊಂಡರೆ ಲಕ್ಷ್ಮಿಪತಿಯವರ ಕ್ಯಾಸ್ಟ್ ಕೆಮಿಸ್ಟ್ರಿ ಪರಿಕಲ್ಪನೆಯ ಪ್ರಕಾರ ಆತನದು ತೇಜಸ್ವಿಯವರದು ಹುಟ್ಟಿನ ಜಾತಿ ಒಂದೇ ಆಗಿರುತ್ತದೆ. ಎಂದರೆ ತೇಜಸ್ವಿಯವರು ತಮ್ಮ ಕಥನಗಳ ನಿರೂಪಣೆಯಲ್ಲಿ ಎಲ್ಲೂ ಕೂಡ ಜಾತಿವಾದಿ ಧೋರಣೆಯನ್ನು ಹೊಂದಿಲ್ಲ ಎಂಬುವುದು ಇದರಿಂದ ಸ್ಪಷ್ಟವಾಗಿ ತೋರುತ್ತಿದೆ. ಆದ್ದರಿಂದ ಅವರು ತಮ್ಮ ಹುಟ್ಟಿನ ಜಾತಿಯ ಪಾತ್ರಗಳು ಹಾಗೂ ಅನ್ಯಜಾತಿಪಾತ್ರಗಳೆಂದು ಪ್ರತ್ಯೇಕಿಸಿ ಉದ್ಧೇಶಪೂರ್ವಕವಾಗಿ ಎಲ್ಲೂ ಕಥನವನ್ನು ಸಂಕುಚಿತ ಮನೋಭಾವದಲ್ಲಿ ನಿರೂಪಿಸಿರುವುದಿಲ್ಲವೆಂಬುವುದು ವೇದ್ಯವಾಗುತ್ತದೆ.

    ಹಾಗೇ ಗಮನಿಸಿಕೊಂಡಂತೆ ಗ್ರಾಮೀಣತೆ ಹಾಗೂ ತಳಸಮುದಾಯದ ಕೈಗನ್ನಡಿಯಂತಿರುವ ದಲಿತ ಸಾಹಿತ್ಯದ ಕಾಲಘಟ್ಟದಲ್ಲೂ ಇಲ್ಲಿನ ಕವಿ, ಕಥೆಗಾರ, ಲೇಖಕರು ಕೆಲವು ವಿವರಣೆಗಳನ್ನು ತಂದಿರುವುದೂ ಇದೆ. ಅದು ತಾವು ಕಂಡ ಕಾಲಘಟ್ಟದ ಕೆಲವು ಪಾತ್ರಗಳ ಸ್ವರೂಪವನ್ನು ವಾಸ್ತವಿಕವಾಗಿ ಓದುಗನಿಗೆ ಪರಿಚಯಿಸುವ ಪರಿಧಿಯೊಳಗೆ ನೋಡಬೇಕಿದೆ. ಹಾಗಂತ ಅದನ್ನು ಅನ್ಯತಾ ಮನಸ್ಥಿತಿಯಿಂದ ನೋಡಲಾಗದು. ಅದು ಒಂದು ಕಾಲ ಸಂದರ್ಭದಲ್ಲಿ ಒಂದು ಪರಿಸರದ ಜನಸಮುದಾಯವು ಹೀಗಿತ್ತು ಎಂಬುದನ್ನು ಪರಿಚಯಿಸುವುದಷ್ಟೇ ಲೇಖಕನ ಕಥನ ಮಾಡಿರುತ್ತೆ. ಈಗ ಅದು ಹಾಗಿಲ್ಲ ಎಂದರೆ ಹಿಂದಿನ ಪರಿಸ್ಥಿತಿ ಸುಧಾರಣೆ ಕಂಡಿದೆ ಎಂದೇ ಭಾವಿಸಬೇಕಾಗುತ್ತದೆ. ತನ್ಮೂಲಕ ಅದು ಪರಿವರ್ತನೆ ಕಂಡುಕೊಂಡಿದೆ ಎಂದರ್ಥ. ಇದಕ್ಕೆ ನಮ್ಮ ಸಮಾಜ ಆಗುಮಾಡಿಕೊಟ್ಟಿರುವುದು ಒಂದೊಳ್ಳೆಯ ಬೆಳವಣಿಗೆಯೇ ಸರಿ. ಇದು ಶೈಕ್ಷಣಿಕ ತಿಳುವಳಿಕೆಯಿಂದ ಮಾತ್ರ ಸಾಧ್ಯವಾಗಿರುವುದು. ನಿಟ್ಟಿನಿಂದ ಗಮನಿಸಿಕೊಂಡಂತೆ ಡಾ.ಸಿದ್ದಲಿಂಗಯ್ಯನವರು ಅವರ ಆತ್ಮಕತೆಊರುಕೇರಿಯಲ್ಲಿ ನಿರೂಪಿಸಿರುವ ಒಂದು ಪ್ರಾಸಂಗಿಕ ವಿವರ ಮುಂದಿನಂತಿದೆ. ಅದರಂತೆ ಕೇರಿಯಲ್ಲಿ ಸದಾ ಕುಡುಕರ ಹಾವಳಿ. ಸಂಜೆ ಆಯಿತೆಂದರೆ ಕುಡುಕರು ಕೂಗುವುದು, ಕುಣಿಯುವುದು, ಜಗಳಕ್ಕೆ ಕಾಲುಕೆರೆಯುವುದರಿಂದ ಜನರ ಗಮನ ಸೆಳೆಯುತ್ತಿದ್ದರು. ಕೆಲವರು ತಮಗೆ ತಿಳಿದಂತೆ ಹಾಡುತ್ತಿದ್ದರು. ಕುಡಿದ ಸಮಯದಲ್ಲಿ ಅವರಿಗೆ ಹೆಂಡತಿ ಮಕ್ಕಳ ಮೇಲಿನ ಪ್ರೀತಿ ಅಧಿಕವಾಗುತ್ತಿತ್ತು. ಕೆಲವರು ತಮ್ಮ ಹೆಂಡತಿಯರೊಂದಿಗೆ ಸಾರ್ವಜನಿಕರೆದುರು ಲೈಂಗಿಕ ಚೇಷ್ಟೆಯಲ್ಲಿ ತೊಡಗಲು ಹಾತೊರೆಯುತ್ತಿದ್ದರು. ಕುಡುಕರು ತಬ್ಬಿಕೊಳ್ಳಲು ಹೋದರೆ ಅವರ ಹೆಂಡತಿಯರು ಕುಡುಕ ಗಂಡನ ಮುಖಕ್ಕೆ ಬಲವಾಗಿ ತಿವಿಯುತ್ತಿದ್ದರು. ಇನ್ನು ಕೆಲವರು ತಮ್ಮ ಮಕ್ಕಳ ಮೇಲಿನ ವ್ಯಾಮೋಹ ಉಮ್ಮಳಿಸಿದ್ದರಿಂದ ಅವರನ್ನು ಬಾಚಿ ಮುದ್ದಿಸಿ ಕಣ್ಣೀರು ಹಾಕುತ್ತಿದ್ದರು. ತಮ್ಮ ಜೇಬಿನಿಂದ ಹಣವನ್ನು ತೆಗೆದು ಹೆಂಡತಿ ಮಕ್ಕಳಿಗೆ ಧಾರಾಳವಾಗಿ ಕೊಡುತ್ತಿದ್ದರು. ಜನಗಳು ಕುಡುಕರ ಹಾವಳಿ ಅತಿಯಾದಾಗ ಅವರನ್ನು ಬಲವಾಗಿ ಹಿಡಿದು ಕುಳ್ಳರಿಸಿ ತಲೆಯ ಮೇಲೆ ತಂಬಿಗೆ ತಣ್ಣೀರನ್ನು ಹೊಯ್ದು ಅವರನ್ನು ಶಮನಗೊಳಿಸುತ್ತಿದ್ದರು. ಗಂಡ ಮಕ್ಕಳಿಲ್ಲದೆ ಒಂಟಿಯಾಗಿದ್ದ ಹೆಂಗಸೊಬ್ಬಳು ಬಹಳ ಕುಡಿಯುತ್ತಿದ್ದಳು. ನಲವತ್ತು ವರ್ಷ ದಾಟಿದ್ದರೂ ನೋಡಲು ಕಟ್ಟುಮಸ್ತಾಗಿದ್ದಳು. ಅವಳಲ್ಲಿ ಇದ್ದ ಒಂದು ದೌರ್ಬಲ್ಯ ಸದಾ ಕುಡಿಯುವುದು. ಕೂಲಿ ಕೆಲಸಕ್ಕೆ ಹೋದವಳು ಸಂಜೆ ಮನೆಗೆ ತೂರಾಡಿಕೊಂಡೇ ಬಂದು ಮಲಗುತ್ತಿದ್ದಳು. ಒಂದು ಬೇಸಗೆ ರಾತ್ರಿ ಅವಳು ಮನೆಯ ಮುಂದೆ ಬೀದಿಯಲ್ಲಿ ಮಲಗಿದ್ದಳು. ಎಚ್ಚರವಿಲ್ಲದೆ ಅವಳ ಬಟ್ಟೆ ಅಸ್ತವ್ಯಸ್ತವಾಗಿತ್ತು. ದಾರಿಯಲ್ಲಿ ಹೋಗುತ್ತಿದ್ದ ಪುಂಡನೊಬ್ಬ ಇದನ್ನು ನೋಡಿ ಅವಳ ಬಳಿ ಹೋಗಿ ಆಲಂಗಿಸಿದ. ಆಕ್ಷೇಪಣೆ ಬರದೆ ಇದ್ದುದರಿಂದ ಅವನ ರತಿಕ್ರೀಡೆ ಮುಂದುವರೆಯಿತು. ಇದನ್ನು ನೋಡಿದ ಇನ್ನಿಬ್ಬರು ಇದೇ ಕೆಲಸ ಮಾಡಿದರು. ಅವಳು ನಿದ್ದೆ ಮಂಪರಿನಲ್ಲಿ  ಕೊಂಚ ಹಾ ಎಂದಳೇ ಹೊರತು ಅವಳಿಂದ ಯಾವುದೇ ಪ್ರತಿರೋಧ ಬರಲಿಲ್ಲ. ಸುದ್ದಿ ಹೇಗೋ ಹಬ್ಬಿ ಹಲವರು ಅಲ್ಲಿ ಜಮಾಯಿಸಿ ತಮ್ಮ ಸರದಿಗಾಗಿ ಕಾಯತೊಡಗಿದರು. ಬೆಳಗಿನ ಜಾವದ ತನಕ ೧೫ ವಯಸ್ಸಿನಿಂದ ಹಿಡಿದು ೭೦ ವಯಸ್ಸಿನವರೆಗಿನವರೆಗಿನ ಅನೇಕರು ಉಚಿತ ಸೌಲಭ್ಯವನ್ನು ಅನುಭವಿಸಿದರು. ಬೆಳಗಾಗುತ್ತಿದ್ದಂತೆ ಎಚ್ಚರಗೊಂಡ ಅವಳು ಎಂದಿನಂತೆ ಇದ್ದಳು.” (ಊರುಕೇರಿ-, ಪುಟ: ೩೦-೩೧) ಇಲ್ಲಿ ತಳಸಮುದಾಯದವರೇ ಆದ ಲೇಖಕ ತನ್ನದೇ ತಳಸಮುದಾಯದ ಸ್ತ್ರೀಯನ್ನು ಕಟ್ಟುಮಸ್ತಾಗಿದ್ದಳು ಎಂದೆಲ್ಲಾ ಶೋಚನಿಯವಾಗಿ ಚಿತ್ರಿಸಿದ್ದಾರೆಂದು ಹೇಳಲಾದಿತೇ? ಹಾಗೇ ಅಭಿಪ್ರಾಯಕ್ಕೆ ಬರಲಾಗದು. ಏಕೆಂದರೆ ಸ್ವತಃ ಇಲ್ಲಿನ ಲೇಖಕರೂ ಕೂಡ ಸಮುದಾಯವನ್ನು ನೋಡಿಕೊಂಡು ಜೊತೆಜೊತೆಗೆ ಬೆಳೆದವರೇ ಆಗಿದ್ದಾರೆ. ಒಂದು ಕಾಲಸಂದರ್ಭದಲ್ಲಿ ತನ್ನ ಊರುಕೇರಿಯಲ್ಲಿ ನಡೆದ ತನ್ನದೇ ಸಮುದಾಯದವರ ಘಟನಾವಳಿಗಳಿಗೆ ಯಥಾವತ್ ಸಂಸ್ಪರ್ಶ ನೀಡಿದ್ದಾರೆನ್ನಬಹುದು. ಇದೇರೀತಿ ತೇಜಸ್ವಿಯವರು ತಮ್ಮ ಕಥನವಾದ ಪರಿಸರದ ಕಥೆಯಲ್ಲಿ ಚಿತ್ರಿಸಿದರೆ ಹೇಗೆ ಅದು ಸ್ವಜಾತಿಯ ಪ್ರಜ್ಞೆಯ ಹೆಚ್ಚುಗಾರಿಯಾಗುತ್ತದೆ ಎಂಬುವುದನ್ನು ವಿಶ್ಲೇಷಕ ಲಕ್ಷ್ಮೀಪತಿಯವರೇ ಹೇಳಬೇಕು. ಆದ್ದರಿಂದ ಈಗ ಲಕ್ಷ್ಮೀಪತಿಯವರು ಬರೆದಿರುವ  ತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿಲೇಖನದಲ್ಲಿ ವಿವರಿಸಿರುವಂತೆ ತೇಜಸ್ವಿಯವರನ್ನು ಮುಂದಿನಂತೆ ಆರೋಪಿಸಿದ್ದಾರೆ. ಅದರಂತೆಹೆಸರಿಲ್ಲದ ಹಾವುಗೊಲ್ಲರವನು ಎಂಗ್ಟನ ಹೆಂಡತಿಗೆ ಒಂದು ರವಿಕೆಯನ್ನು ತೆಗೆದುಕೊಡಲು ಕಾಸನ್ನು ಕೇಳುತ್ತಾನೆ. ಅದಕ್ಕೆ ತೇಜಸ್ವಿ ಹೀಗೆ ಬರೆಯುತ್ತಾರೆ- ‘ಅದೂ ಸುಳ್ಳೇ. ಸಂಜೆ ಸರಿಯಾಗಿ ಷರಾಬು ಹುಯ್ದುಕೊಳ್ಳುವುದಕ್ಕಷ್ಟೇ ಅವನು ಹಣ ಕೇಳುತ್ತಿದ್ದುದು. ಆದರೆ ಇದೆಲ್ಲ ಸುಳ್ಳು ಎಂದು ಅವನಿಗೆ ಜೋರುಮಾಡಿ ತನಿಖೆಗೆ ಹೊರಟರೆ ಇನ್ನೂ ಹಲವಾರು ಗಂಟೆ ಅವನ ಕಪಟ ನಾಟಕ ನೋಡುತ್ತಾ ಇರಬೇಕಾಗುತ್ತದೆ. ಅದಕ್ಕಾಗಿ ಅವನಿಗೆ ಕೂಡಲೆ ಒಂದು ರೂಪಾಯಿ ಕೊಟ್ಟೆ. ಅವನು ಪರಮಾನಂದದಿಂದ ಎಂಗ್ಟನ ಆತ್ಮಕ್ಕೆ ಶಾಂತಿ ಕೋರುತ್ತಾ ಅಲ್ಲಿಂದ ನಿರ್ಗಮಿಸಿದ- ಪ್ರಾತಿನಿಧಿಕವಾಗಿ ಮೇಲೆ ಉಲ್ಲೇಖಿಸಿರುವ ನಿರೂಪಣೆಗಳನ್ನು ಗಮನಿಸಿದರೆ ಹಾವುಗೊಲ್ಲರವನು, ಮಾಸ್ತಿ, ಬೈರರ ಜೀವನಗಳ ಬಗೆಗೆ ಉಡಾಫೆಯ ಶೈಲಿಯಲ್ಲಿ ಲೇಖನಗಳು ಮಾತಾಡುತ್ತವೆ. ಯುರೋಪಿನ ಬಿಳಿಯ ಮನುಷ್ಯರಿಗೆ ಏಷ್ಯಾದ ಮತ್ತು ಆಫ್ರಿಕಾದ ಜನರು ಅನಾಗರಿಕರು, ಅಯೋಗ್ಯರು ಮತ್ತು ಮೋಸಗಾರರಂತೆ ಕಾಣುತ್ತಾರೆ. ಅದೇ ರೀತಿ ತೇಜಸ್ವಿಯ ಮೇಲ್ಜಾತಿ ಒಕ್ಕಲಿಗ ಕಣ್ಣಿಗೆ ಇವರ ರೂಪ, ಆಹಾರ ಕ್ರಮ, ಕಠಿಣ ಶ್ರಮದ ದುಡಿಮೆಯಿಂದಾಗಿ ಕಾಪಾಡಿಕೊಳ್ಳಲು ಆಗದ ದೇಹದ ಶುಚಿಯ ಕುರಿತು ತಮ್ಮವರೆನ್ನುವ ಪ್ರೀತಿ ಬರದೆ ಅನಾಗರಿಕ ಪ್ರಾಣಿಯಂತೆ ಗೋಚರಿಸುತ್ತಾರೆ. ಎಂಗ್ಟನ ಹೆಂಡತಿಯ ಕುರಿತ ಮಾನವೀಯತೆ ವ್ಯಕ್ತಪಡಿಸುವವನ ಕುರಿತು ಷರಾಬು ಕುಡಿಯಲು ದುಡ್ಡು ಕಿತ್ತುಕೊಳ್ಳುವ ನಾಟಕದಂತೆ ತೋರುತ್ತದೆಎಂಬ ಲಕ್ಷ್ಮೀಪತಿಯವರ ವಿಶ್ಲೇಷಣೆಯ ನೋಟವೇ ಸರಿಕಾಣದು. ತೇಜಸ್ವಿಯವರೇನೋ ಒಕ್ಕಲಿಗರಾಗಿ ತಮಗಿಂತಲೂ ಸಾಮಾಜಿಕವಾಗಿ ಕೆಳಸ್ತರದವರನ್ನು ಹಾಗೇ ಚಿತ್ರಿಸಿದ್ದಾರೆನ್ನುವುದಾದರೆ ಅಂತದ್ದೇ ಕೆಳಸ್ತರ ಸಮುದಾಯದ ಡಾ.ಸಿದ್ದಲಿಂಗಯ್ಯನವರ ಊರುಕೇರಿಯಲ್ಲಿ ಚಿತ್ರಣಗೊಂಡಿರುವ ತಳಸಮುದಾಯದವರ ಚಿತ್ರವು ಹೆಚ್ಚುಕಡಿಮೆ ಅದೇರೀತಿಯಲ್ಲಿ ಮೂಡಿಬಂದಿದೆಯಲ್ಲವೇ? ಆದ್ದರಿಂದ ಎಲ್ಲಾ ಸಾಹಿತ್ಯ ಮಾರ್ಗಗಳನ್ನು ಲಕ್ಷ್ಮೀಪತಿಯವರಂತೆ ಕ್ಯಾಸ್ಟ್ ಕೆಮಿಸ್ಟ್ರಿಯ ಹಿನ್ನೆಲೆಯಲ್ಲಿ ನೋಡಲಾಗದು.

   ಇನ್ನೂ ವಿಶೇಷ ಎಂದರೆ ತಮ್ಮ ಬಹುಪಾಲು ಜೀವನಯಾನವನ್ನು ನಡೆಸಿದ ತೇಜಸ್ವಿಯವರ ಕಾರ್ಯಕ್ಷೇತ್ರವಾಗಿದ್ದ ಮೂಡಿಗೆರೆ ತಾಲ್ಲೂಕು ಕರ್ನಾಟಕ ವಿಧಾನಸಭಾದ ದಲಿತ ಮೀಸಲು ಕ್ಷೇತ್ರವಾಗಿದೆ. ಇಲ್ಲಿಂದ ಕರ್ನಾಟಕ ವಿಧಾನಸಭೆಯನ್ನು ಪ್ರವೇಶಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ರಾಜ್ಯವ್ಯಾಪಿ ಸ್ತ್ರೀಶಕ್ತಿ ಸಂಘಟನೆಯನ್ನು ಕಟ್ಟಿ ಬೆಳೆಸಿದ ದಲಿತರ ಜೀವಶಕ್ತಿ ಹಾಗೂ ಸ್ತ್ರೀಲೋಕದ ಅಸ್ಮಿತೆ ಎಂದೆಲ್ಲಾ ಹೆಸರುವಾಸಿಯಾಗಿರುವ ಮಾಜಿ ಸಚಿವೆ ಮೋಟಮ್ಮನವರುಬಿದಿರು ನೀನ್ಯಾರಿಗಲ್ಲದವಳುಎಂಬ ಆತ್ಮಕಥನವನ್ನು ಬರೆದು ಪ್ರಕಟಿಸಿದ್ದಾರೆ. ಇದರಲ್ಲಿನಮ್ಮ ಹೆಮ್ಮೆಯ ಪೂರ್ಣಚಂದ್ರ ತೇಜಸ್ವಿ!’ ಎಂಬ ಅಧ್ಯಾಯವೊಂದಿದೆ. ಅದರಲ್ಲಿವರು ತಾವು ತೇಜಸ್ವಿಯವರ ಜೊತೆಗೆ ಹೊಂದಿದ್ದ ಆತ್ಮೀಯತೆಯ ಬಾಂಧವ್ಯದ ಕ್ಷಣಗಳನ್ನು ದಾಖಲಿಸಿದ್ದಾರೆ. ಅದರಂತೆ ತೇಜಸ್ವಿ ಹಾಗೂ ಅವರ ಶ್ರೀಮತಿ ರಾಜೇಶ್ವರಿಯವರು ಮೋಟಮ್ಮನವರ ಮನೆಗೆ ಊಟಕ್ಕೆ ಹೋದ ಪ್ರಸಂಗ ಇಂತಿದೆ. “ತೇಜಸ್ವಿ ಪತ್ನಿ ಸಮೇತ ಬಂದ್ರು. ಹೆಚ್ಚಿಗೆ ಮಾತನಾಡದೆ ನೇರವಾಗಿ ಊಟಕ್ಕೆ ಕುಳಿತರು. ಬಡಿಸಿದೆವು. ಒಂದೆರಡು ತುತ್ತು ತಿನ್ನುತ್ತಲೇತುಂಬಾ ರುಚಿಯಾಗಿದೆ. ಮಟನ್ ಸಾರ್ ಇಷ್ಟು ರುಚಿಯಾಗಿ ಮಾಡಿದ್ದಿರಲ್ಲಾ? ಏನೆಲ್ಲಾ ಪದಾರ್ಥ ಸೇರಿಸಿ ಮಾಡಿದ್ದಿರಿ? ನನ್ನ ಹೆಂಡ್ತಿಗೂ ಹೇಳಿಕೊಡಿಅಂದ್ರು. ‘ರಾಜೇಶ್ವರಿ ಕೇಳಿ ಬರೆದಿಟ್ಟುಕೋಅಂದ್ರು. ಆಮೇಲೆ ಮೀನು ಫ್ರೆ ತಿಂದರು. ‘ತುಂಬಾ ಚೆನ್ನಾಗಿದೆ. ಕೆಲವರು ಹುಳಿ, ಉಪ್ಪು, ಖಾರ ಸರಿಯಾಗಿ ಹಾಕಿರುವುದಿಲ್ಲ. ತಿನ್ನಲಾಗದುಅಂದ್ರು. ಇನ್ನೊಂದು ತಿನ್ನಿ ಸರ್ ಅಂದ್ರೆ, ‘ಥೂ ಹೀಗೆ ಮಾಡಿದ್ರೆ ಊಟನೇ ಮಾಡಲ್ಲಅಂತ ಎದ್ದರು. ನನಗೆ ಶಾಕ್ ಆಗಿ, ‘ಕ್ಷಮಿಸಿ ಸರ್ ಕ್ಷಮಿಸಿಅಂತ ಕೇಳಿಕೊಂಡಾಗ ಕುಳಿತರು. ‘ನೋಡ್ರಿ ಊಟಕ್ಕೆ ಬಲವಂತ ಮಾಡಬಾರದು. ಸಿಟ್ಟು ಬರ್ತದೆ. ಎಷ್ಟು ಬೇಕೋ ಅಷ್ಟು ತಿನ್ನುತ್ತಾರೆ. ಹಿಂಸೆ ಪಟ್ಟುಕೊಂಡು ಊಟ ಮಾಡಬಾರದು. ಹೌದು ತಾನೆ?’ ಅಂದ್ರು. ‘ನಿಜ ಸರ್ಅಂದೆ. ಸಾವಕಾಶವಾಗಿ ಊಟಮಾಡಿ ಕೈತೊಳೆದು ಎದ್ದರು. ಎಲೆ, ಅಡಿಕೆ ಇಟ್ಟಿದ್ದೆ. ಅವರು ಎಲೆ-ಅಡಿಕೆ ಹಾಕಲಿಲ್ಲ. ಬರ್ತೀನಿ ಎಂದು ಹೊರಟರು. ನಾನು ಅವರ ಪತ್ನಿ ರಾಜೇಶ್ವರಿಯವರಿಗೆ ತಾಂಬೂಲ ಕೊಡಲು ಮುಂದಾದೆ. ‘ಈಗ ತಾಂಬೂಲ ನೀವು ಕೊಡುವುದು, ನಮ್ಮ ಮನೆಗೆ ನೀವು ಬಂದಾಗ ನನ್ನ ಹೆಂಡ್ತಿ ನಿಮಗೆ ತಾಂಬೂಲ ಕೊಡೋದು- ಪದ್ಧತಿ ಸರಿಯೇ ಬೇಡ ಕಣ್ರೀಅಂತ ಹೇಳಿದರು. ನನಗೆ ಸ್ವಲ್ಪ ವಿಚಿತ್ರ ಅನಿಸಿತು. ಆದರೆ ತುಂಬಾ ಸರಳ ಸ್ವಭಾವದ ವ್ಯಕ್ತಿ. ಅಲ್ಲಿಂದ ತೇಜಸ್ವಿಯವರ ಜೊತೆಗೆ ಸಲಿಗೆಯಿಂದ ಫೋನ್ ಮಾಡಿ ಸಲಹೆ ಕೇಳುತ್ತಿದ್ದೆ.” (ಪುಟ:೩೧೭-೩೧೮) ಎಂದು ಬರೆದಿರುವ ಮೋಟಮ್ಮನವರ ಕಥನದಲ್ಲಿ ತೇಜಸ್ವಿಯವರ ನೇರ, ಸರಳ, ಸಂಕೋಚವಿಲ್ಲದ ದಿಟ್ಟನಿಲುವು, ರೂಢಿಗತವಾದ ಸಂಪ್ರದಾಯವನ್ನು ಮೀರಿದ ವೈಚಾರಿಕ ವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ.

   ಆದ್ದರಿಂದ ತೇಜಸ್ವಿ ಅವರ ನಿಜವಾದ ವ್ಯಕ್ತಿತ್ವ ಮತ್ತು ಸಾಹಿತ್ಯ ದರ್ಶನ ನಮಗಾಗಬೇಕಾದರೆ ಯಾವತ್ತೂ ದೂರವಾಗಿಯೇ ನಿಂತು ದೂರದೃಷ್ಟಿ ಇಲ್ಲದ ಚಿಂತನೆಗಳನ್ನು ಮಾಡಬಾರದಾಗಿದೆ. ಮೋಟಮ್ಮನವರು ಇದೇ ಅಧ್ಯಾಯದಲ್ಲಿ ಮತ್ತೊಂದು ಸಂಗತಿಯನ್ನು ವಿವರಿಸಿದ್ದಾರೆ. ಇದನ್ನೂ ಇಲ್ಲಿ ಸಾಂದರ್ಭಿಕವಾಗಿ ವಿಶ್ಲೇಷಣೆಗೆ ಕೈಗೆತ್ತಿಕೊಳ್ಳುವುದು ಸೂಕ್ತ ಎನಿಸುತ್ತದೆ. “ಒಂದು ಮಹಿಳಾ ಕಾರ್ಯಕ್ರಮಕ್ಕೆ ತೇಜಸ್ವಿ ಅವರನ್ನು ಆಹ್ವಾನಿಸಲು ಹೋಗಿದ್ದೆವು. ಆದರೆ ಅವರು ನಿರಾಕರಿಸಿ, ಹೋಗ್ರಿ ಮೋಟಮ್ಮ ಯಾವ ಸಭೆ ಸಮಾರಂಭಗಳಿಗೂ ನನ್ನನ್ನು ಕರೆಯಬೇಡಿ. ಅದರಲ್ಲೂ ಹೆಣ್ಣುಮಕ್ಕಳ ಸಭೆ ಸಮಾರಂಭಗಳಿಗಂತೂ ಕರೆಯಲೇಬೇಡಿ. ಒಂದು ರೀತಿ ಭಯ, ಮುಜುಗರ ಎಂದು ಹೇಳಿದರು. ನಮಗೆ ಆಶ್ಚರ್ಯವಾಯಿತು. ನಗಾಡಿದೆವು. ‘ಬೇಕಾದರೆ ನಾನು ಕಿರಗೂರಿನ ಗಯ್ಯಾಳಿಗಳು ಪುಸ್ತಕ ಕೊಡ್ತೀನಿ ಓದಿಕೊಳ್ಳಿ. ನಾಯಕತ್ವ ರೂಪಿಸಿಕೊಳ್ಳಿ. ಸಂಘಟಿತ ಹೋರಾಟ ಮಾಡಿಅಂದರು. ಆಮೇಲೆ ನಮ್ಮ ಮಹಿಳಾ ಸಂಘಟನೆ ಪಕ್ಷಾತೀತವಾಗಿ ಸಂಘಟಿತವಾಯಿತು(ಪುಟ:೩೨೦-೩೨೧) ಎನ್ನುವಲ್ಲಿ ಪರೋಕ್ಷವಾಗಿ ತೇಜಸ್ವಿಯವರ ಪ್ರಭಾವ, ಪ್ರೇರಣೆ ಮಹಿಳಾ ಸಂಘಟನೆಗಳಿಗೂ ಆಗಿದೆ ಎಂದಾಯಿತು. ಅದರಂತೆ ಮೋಟಮ್ಮನವರು ಕಟ್ಟಿದ ಸ್ತ್ರೀಶಕ್ತಿ ಸಂಘಟನೆ ನಮ್ಮ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ದೇಶಕ್ಕೆ ಮಾದರಿಯಾಗಿದೆ ಎಂದುಕೊಂಡರೆ ಉತ್ಪೆಕ್ಷೆ ಎನಿಸದು. ಈಗಿಲ್ಲೆ ಗಮನಿಸಿಕೊಂಡಂತೆ ಡಾ.ಸಿದ್ದಲಿಂಗಯ್ಯ ಅವರಊರುಕೇರಿಯಲ್ಲಿನ ನೆನಪಿನಂಗಳದ ಬರವಣಿಗೆಯ ಕಾಲಘಟ್ಟದಲ್ಲಿನ ಮಹಿಳೆಯು ಕಾಲ ಸಂದರ್ಭ ಮತ್ತು ಆಗಿನ ಪರಿಸ್ಥಿತಿಯ ಅಬಲೆ ಸ್ಥಿತಿಗತಿಯವಳು. ಆಕೆಯನ್ನು ಅವರು ಹಾಗೇ ಚಿತ್ರಣ ಮಾಡುವುದು ವಾಸ್ತವವಾದಿ ಲೇಖನ ಅನಿವಾರ್ಯತೆಯೇ ಆಗಿರುತ್ತದೆ. ಆದರೆ ಮೋಟಮ್ಮನವರಬಿದಿರು ನೀನ್ಯಾರಿಗಲ್ಲದವಳುಬರವಣಿಗೆಯ ಕಾಲಘಟ್ಟದಲ್ಲಿನ ಸಂಘಟಿತಗಳಾಗುತ್ತಿರುವ ಮಹಿಳೆಯು ಸಬಲತೆಯ ಕಡೆಗೆ ಹೆಜ್ಜೆ ಹಾಕುತ್ತಿರುವಳೇ ಆಗಿರುವುದರಿಂದ ಇಲ್ಲಿನ ಚಿತ್ರಣ ಊರುಕೇರಿಯ ಮಹಿಳೆಗಿಂತ ತುಂಬಾ ಸುಧಾರಿತವಾಗಿದೆ. ಹಾಗಂತ ಸಿದ್ದಲಿಂಗಯ್ಯನವರು ಮಹಿಳೆಯನ್ನು ಗೌರವಯುತವಾಗಿ ಚಿತ್ರಿಸಿಲ್ಲ. ಮೋಟಮ್ಮನವರು ತುಂಬಾ ಉತ್ಕೃಷ್ಟವಾಗಿ ಕಂಡುಕೊಂಡಿದ್ದಾರೆನ್ನಲಾದೀತೆ? ಖಂಡಿತ ಇಲ್ಲ. ಅದನ್ನು ಆಯಾ ಕಾಲ ಸಂದರ್ಭದ ಅಡಿಯಲ್ಲಿ ಯಥಾವತ್ತು ದಾಖಲಿಸುವುದು ವಾಸ್ತವಾದಿ ಬರಹಗಾರರ ಪ್ರಮುಖ ಧ್ಯೇಯವಾಗಿರುತ್ತದೆಂಬುದನ್ನು ಮತ್ತೊಮ್ಮೆ ಇಲ್ಲಿ ಹೇಳಲೇನು ಉಳಿದಿಲ್ಲ. ಹೀಗೇ ತೇಜಸ್ವಿಯವರ ವಾಸ್ತವ ಬದುಕಿನ ಕ್ರಮದ ಹಿನ್ನೆಲೆಯಲ್ಲಿ ಅವರ ರಚನೆಯ ಸಾಹಿತ್ಯವನ್ನು ನೋಡಿದರೆ ಅದರ ಅರ್ಥಗೌಣವಾಗುವುದಿಲ್ಲ. ಅದರಂತೆ ಅವರ ಮೂಲ ಆಶಯ ತಪ್ಪಾಗಿ ಅರ್ಥೈಸಲ್ಪಡುವುದಿಲ್ಲ. ಇದನ್ನು ಸಮಾಜಮುಖಿ ಸ್ವಾಸ್ಥ್ಯಪ್ರಜ್ಞೆಯ ಪ್ರತಿಯೊಬ್ಬ ಚಿಂತಕನು ಆತ್ಮವಿಮರ್ಶೆಯ ಮೂಲಕ ವಿವೇಚನೆಗೆ ತಂದುಕೊಳ್ಳಬೇಕಿದೆ.

 ಉಪಸಂಹಾರ:

ನಾವುಬುದ್ಧ, ಬಸವ, ಅಂಬೇಡ್ಕರ್ಎಂದು ಜಾತ್ಯಾತೀತ ತತ್ವಗಳನ್ನು ಹೇಳುವಲ್ಲಿ ಮಹಾನ್ ನಾಯಕರನ್ನು ಮಾತು ಮತ್ತು ಬರವಣಿಗೆಯಲ್ಲಿ ಉಲ್ಲೇಖ ಮಾಡುತ್ತಲೇ ನಮ್ಮದೇಯಾದಂತಹ ಸ್ವತಂತ್ರ ಪ್ರವೃತ್ತಿಯ ವೈಚಾರಿಕ ವ್ಯಕ್ತಿತ್ವವನ್ನು ಕಂಡುಕೊಳ್ಳುತ್ತ ಮುಂದೆ ಸಾಗುತ್ತಲೇ ಬಂದಿದ್ದೇವೆ. ಮತ್ತೆ ಇವರಲ್ಲೇ ಯಾರು ನಮ್ಮವರೆಂದು ಜಾತಿಯನ್ನು ಹುಡುಕಿ ಪ್ರೀತಿಯನ್ನೇ ಕೆದಕಿ ಕ್ಯಾಸ್ಟ್ ಕೆಮಿಸ್ಟ್ರಿ ಪ್ರಕಾರ ಇವರು ನಮ್ಮವರಲ್ಲ, ಆದ್ದರಿಂದ ಇವರ ಚಿಂತನೆ ನಮಗೆ ಪೂರಕವಾಗಿರುವುದಿಲ್ಲ.  ಇವರು ಮಾತ್ರ ನಮ್ಮವರೆಂದು ಎಂದು ನವ ಟ್ರಾಕ್ ಅನ್ನು ಸೃಷ್ಟಿಸುವುದು, ಇದೇ ಅವಸರದ ಭರದಲ್ಲಿ  ಹಿಂದೆ ಮಾದರಿಯ ಪ್ರಾತ್ಯಕ್ಷಿಕೆಯಂತಿದ್ದು ಇಲ್ಲಿಯವರೆಗೆ ಮುನ್ನಡೆದುಕೊಂಡು ಬರಲು ಕಾರಣವಾಗಿದ್ದ ಹಳೆಯ ಟ್ರಾಕನ್ನು ಏಕ್ದಂ ಒಂದೇ ಸಲಕ್ಕೆ ದಿಕ್ಕುತಪ್ಪಿಸಿ ಬೆಂಡ್ಮಾಡುವುದಲ್ಲದೇನೋಡಿ ಇದೇ ಸರಿ, ಹೊಸತಿದು..’ ಎಂದು ನಿರೂಪಿಸುವುದು ಹೆಚ್ಚು ಸಮಂಜಸ ಎನಿಸದು. ಕೊನೆಗೊಂದು ಮಾತು: ಇದನ್ನು ತೇಜಸ್ವಿಯವರದ್ದೇಕರ್ವಾಲೊಕಾದಂಬರಿಯಿಂದ ತೆಗೆದುಕೊಳ್ಳಲಾಗಿದೆ. ಕಾದಂಬರಿಯ ಅಂತಿಮಘಟ್ಟದಲ್ಲಿ ಬರುವ ಹೇಳಿಕೆ ಇದು. ಲೇಖನದ ಮುಕ್ತಾಯದ ಹಂತಕ್ಕೂ ಇದು ಪೂರಕವಾಗಿರುತ್ತದೆ ಎಂದೇ ಭಾವಿಸಲಾಗಿದೆ. “ಸರಿ ತಪ್ಪು ಹೇಗೆ ಹೇಳ್ತೀರಿ; ನಮಗೆ ಕ್ಷಣ, ಇಲ್ಲಿ ಹೀಗನಿಸಿದೆ. ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!”  ಅದರಂತೆ ತೇಜಸ್ವಿಯವರ ಪ್ರಮುಖ ನುಡಿಯೊಂದು ಅವರು ಎಷ್ಟು ಜಾತ್ಯತೀತರಾಗಿದ್ದರೆಂಬುವುದಕ್ಕೆ  ಲೇಖನದ ಓದಿನ ಮುಕ್ತಾಯದಲ್ಲಿ ಅತ್ಯುತ್ತಮ ನೆನಪಿನ ಉದಾಹರಣೆ ಕೂಡ ಆಗಿರುತ್ತದೆ. ಅದು ಹೇಗೆಂದರೆ ಜಾತಿ ಮರೆತು ಪ್ರೀತಿಯಿಂದ ಬದುಕುವ ತಿಳುವಳಿಕೆಯ ಬಾಳಿಗೆ ಅನುಭವಜನ್ಯ ವಿವೇಕದಂತೆ. “ಹಳೇಕಾಲದವರನ್ನು ಬಿಡ್ರಿ. ೨೧ ವರ್ಷ ಓದಿ ಡಿಗ್ರಿ ಪಾಸ್ ಮಾಡಿ, ತಮ್ಮ ಮಕ್ಕಳಿಗೆ ಗೌಡ, ಶೆಟ್ಟಿ ಅಂತ ಜಾತಿಯಿಂದ ಕೊನೆಗೂ ಹೆಸರಿಡೋದು ನೋಡಿದ್ರೆ, ಇವರಿಗೆ ತಮ್ಮ ಜೀವಮಾನದಲ್ಲಿ ಆದರ್ಶಪ್ರಾಯ ಗುರುವಾಗ್ಲಿ, ಪುಸ್ತಕವಾಗ್ಲಿ ಸಿಕ್ಕಿಲ್ಲ ಅಂತಾನೆ ಅರ್ಥ!”


ಅಭ್ಯಾಸ ಸೂಚಿ:

. ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿವಿಧ ವರ್ಷದ ಪ್ರಕಟಣೆಗಳು, ಪರಿಸರದ ಕಥೆ, ಚಿದಂಬರ ರಹಸ್ಯ, ಕರ್ವಾಲೊ, ಕಿರಗೂರಿನ ಗಯ್ಯಾಳಿಗಳು, ವಿಮರ್ಶೆಯ ವಿಮರ್ಶೆ, ಹೊಸ ವಿಚಾರಗಳು, ಪುಸ್ತಕ ಪ್ರಕಾಶನ, ಮೈಸೂರು - ೫೭೦೦೦೯

. ಪ್ರೊ.ಜಿ.ಟಿ.ವೀರಪ್ಪ, ಡಾ.ಎಂ.ಬೈರೇಗೌಡ(ಸಂ.), ೨೦೦೪, ತೇಜಸ್ವಿ - ಸಾಹಿತ್ಯ ಕೃಷಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು೫೬೦೦೦೨

. ಡಾ.ಸಿದ್ದಲಿಂಗಯ್ಯ, ೨೦೧೪, ಊರುಕೇರಿ, ಅಂಕಿತ ಪ್ರಕಾಶನ, ಬೆಂಗಳೂರು೫೬೦೦೦೪

. ಶ್ರೀಮತಿ ಮೋಟಮ್ಮ, ೨೦೨೨, ಬಿದಿರು ನೀನ್ಯಾರಿಗಲ್ಲದವಳು (ಪ್ರಸಿದ್ಧ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ಆತ್ಮಕಥನ; ನಿರೂಪಣೆವೀರಣ್ಣ ಕಮ್ಮಾರ), ವಿಕಾಸ ಪ್ರಕಾಶನ, ಬೆಂಗಳೂರು೫೬೦೦೪೦

. ಡಾ.ಸಿ.ಜಿ.ಲಕ್ಷ್ಮಿಪತಿ, ಆಗಸ್ಟ್  ೨೦೨೪, ತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿ - ಜನಪರ ಮಾತುಕತೆ ಪತ್ರಿಕೆ, ಬೆಂಗಳೂರು.


                 
ಡಾಸಂಪತ್ ಬೆಟ್ಟಗೆರೆ




No comments:

Post a Comment